ವಾಷಿಂಗ್ಟನ್: ‘ಭಾರತ ಸೇರಿದಂತೆ ಜಗತ್ತಿನಾದ್ಯಂತ ನಡೆಯುವ ಎಲ್ಲ ಚುನಾವಣೆಗಳಲ್ಲಿ ಫೇಸ್‌ಬುಕ್‌ನಿಂದ ವೈಯಕ್ತಿಕ ಮಾಹಿತಿ ಕಳ್ಳತನವಾಗದಂತೆ ಕ್ರಮಕೈಗೊಳ್ಳಲು ಬದ್ಧವಾಗಿದ್ದೇವೆ’ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್‌ಬರ್ಗ್ ತಿಳಿಸಿದ್ದಾರೆ.
ಮಾಹಿತಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಮೆರಿಕ ಸಂಸದರ ಮುಂದೆ ವಿಚಾರಣೆಗೆ ಹಾಜರಾಗಿದ್ದ ಅವರು, ‘ಚುನಾವಣೆಗೆ ಸಂಬಂಧಿಸಿದಂತೆ 2018ನೇ ವರ್ಷ ಅತ್ಯಂತ ಮಹತ್ವದ್ದಾಗಿದೆ. ಭಾರತ, ಬ್ರೆಜಿಲ್, ಮೆಕ್ಸಿಕೊ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ಇದು ಚುನಾವಣೆಯ ವರ್ಷ. ಈ ಚುನಾವಣೆಗಳ ಸಮಗ್ರತೆ ಕಾಪಾಡಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.
‘ಎಲ್ಲರ ಖಾತೆಯು ಅಧಿಕೃತವಾಗಿರಬೇಕು. ಇದಕ್ಕಾಗಿ ತಾಂತ್ರಿಕ ಸಾಧನಗಳನ್ನು ರೂಪಿಸಲಾಗುವುದು. ಮುಖ್ಯವಾಗಿ ಸರ್ಕಾರದ ಅಧಿಕೃತ ಗುರುತಿನ ಚೀಟಿಯ ವಿವರ ಕೇಳಲಾಗುವುದು. ನಾವು ಖಾತೆದಾರರ ಸ್ಥಳ ಪರಿಶೀಲಿಸುತ್ತೇವೆ. ಇದರಿಂದ ಯಾರೋ ಒಬ್ಬರು ರಷ್ಯಾದಲ್ಲಿ ಕುಳಿತು ಅಮೆರಿಕದಲ್ಲಿ ಇದ್ದೇನೆ ಎಂದು ಸುಳ್ಳು ಹೇಳುವಂತಿಲ್ಲ’ ಎಂದಿದ್ದಾರೆ.
‘ನಕಲಿ ಖಾತೆಗಳನ್ನು ಗುರುತಿಸಲು ಫೇಸ್‌ಬುಕ್ ಹೊಸದಾಗಿ ಕೃತಕ ಚತುರ ವ್ಯವಸ್ಥೆ ರೂಪಿಸಿದೆ. ಇದರಿಂದ ಚುನಾವಣೆಯಲ್ಲಿ ತಪ್ಪು ಮಾಹಿತಿ ಹರಡುವುದು ತಪ್ಪುತ್ತದೆ’ ಎಂದು ಮಾರ್ಕ್ ಝುಕರ್‌ಬರ್ಗ್ ತಿಳಿಸಿದ್ದಾರೆ.