janadhvani

Kannada Online News Paper

ಮಂಗಳೂರಿನಲ್ಲಿ ಮೃತಪಟ್ಟಿದ್ದ ವ್ಯಕ್ತಿ ಉಪ್ಪಳ ತಲುಪಿದಾಗ ಜೀವಂತ..!

ಮಂಗಳೂರು,ಜ.20: ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕ ನಿವಾಸಿಯೋರ್ವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದು ಮೃತಪಟ್ಟಿದ್ದಾರೆಂದು ಖಚಿತಪಡಿಸಿ ಮನೆಯವರಿಗೆ ಬಿಟ್ಟುಕೊಟ್ಟಿದ್ದು, ವ್ಯಕ್ತಿಯು ಮಾರ್ಗಮಧ್ಯೆ ಜೀವಂತವಾಗಿ ಉಸಿರಾಡಿದ ಘಟನೆ ನಡೆದಿದೆ.

ಅಸೌಖ್ಯದ ಹಿನ್ನೆಲೆಯಲ್ಲಿ, ಕೂಲಿಕಾಮಿರ್ಕರಾದ ಗುರುವ(60) ಎಂಬವರನ್ನು ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ತಪಾಸಣೆ ನಡೆಸಿದ ವೈದ್ಯರು, ರೋಗಿ ಆಕ್ಸಿಜನ್​ ಸಹಾಯದಿಂದ ಮಾತ್ರ ಉಸಿರಾಡುತ್ತಿದ್ದು, ಆಕ್ಸಿಜನ್​ ತೆರವುಗೊಳಿಸಿದಲ್ಲಿ ಪ್ರಾಣ ಹೋಗುತ್ತದೆ ಎಂದು ಹೇಳಿದ್ದರು. ಅದರಂತೆ ಆಕ್ಸಿಜನ್​ ತೆರವುಗೊಳಿಸಲಾಗಿತ್ತು.

ಬಳಿಕ ಮನೆಗೆ ಫೋನ್​ ಮಾಡಿ, ಅಂತ್ಯಸಂಸ್ಕಾರಕ್ಕೆ ಚಿತೆ ತಯಾರಿ ಮಾಡುವಂತೆ ಸಂಬಂಧಿಕರು ಸೂಚನೆ ನೀಡಿದ್ದರು. ಅವರ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದರು. ಮಂಗಳೂರು ಆಸ್ಪತ್ರೆಯಿಂದ ಮೃತದೇಹ ಕೊಂಡೊಯ್ಯುತ್ತಿದ್ದ ಮಾರ್ಗಮಧ್ಯೆ ಉಪ್ಪಳ ತಲುಪುತ್ತಿದ್ದಂತೆ ಗುರುವ ಅವರ ದೇಹದಲ್ಲಿ ಚಲನೆ ಕಂಡುಬಂದಿದೆ. ಉಸಿರಾಟ ಆರಂಭವಾಗಿದೆ. ತಕ್ಷಣ ರೋಗಿಯನ್ನು ಬದಿಯಡ್ಕದ ಕ್ಲಿನಿಕ್​ಗೆ ಕರೆದೊಯ್ದಿದ್ದು ಗುರುವ ಜೀವಂತವಾಗಿ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಕಾಸರಗೋಡಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ.