ಬೆಂಗಳೂರು: ಕೋಮುವಾದಿಗಳು ಸರ್ವಾಧಿಕಾರಿಗಳಾಗುತ್ತೇವೆ ಎಂದು ಓಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕುವ ಮೂಲಕ ಭಾರತವನ್ನು ಸೌಹಾರ್ದಯುತ, ಪ್ರೀತಿಯುತ ದೇಶವನ್ನಾಗಿ ಮಾಡಬೇಕು ಎಂದು ನಟ ಪ್ರಕಾಶ ರೈ ಹೇಳಿದರು.
ಸ್ವಾತಂತ್ಯ ಸೇನಾನಿ ಎಚ್.ಎಸ್. ದೊರೆಸ್ವಾಮಿ ಶತಮಾನೋತ್ಸವ ಸಮಿತಿ ನಗರದಲ್ಲಿ ಆಯೋಜಿಸಿದ್ದ ‘ದೊರೆಸ್ವಾಮಿ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.
ಸಮುದ್ರ, ಶಿಖರ, ಜೀವನದಿ ಮುಂದೆ ನಿಂತರೆ ನನಗೆ ಮಾತು ಬರುವುದಿಲ್ಲ. ದೊರೆಸ್ವಾಮಿ ಅವರ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ. ಅವರ ವಯಸ್ಸಿನ ಅರ್ಧದಷ್ಟು ವಯಸ್ಸು ನನಗೆ ಆಗಿದೆ ಎಂದರು.
ಬಂಡೀಪುರಕ್ಕೆ ಹೋಗಿದ್ದಾಗ ದೊಡ್ಡ ಸಂಪಿಗೆ ಮರ ನೋಡಿದ್ದೆ. ಆ ಮರ ತನ್ನ ಬದುಕಿನಲ್ಲಿ ಎಷ್ಟೆಲ್ಲಾ ವಸಂತ, ಮಳೆಯನ್ನು ನೋಡಿದೆ. ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡಿರುತ್ತದೆ ಎಂಬ ಯೋಚನಾ ಲಹರಿಗೆ ಜಾರಿದ್ದೆ. ಮರದ ಕೆಳಗೆ ಹೋದರೆ ತಾಯಿಯ ಮಡಿಲಿನಂತಹ ಸಾಂತ್ವನ ಸಿಗುತ್ತದೆ. ನಂಬಿಕೆ, ವಿಶ್ವಾಸ ಸಿಗುತ್ತದೆ. ಅದೇ ರೀತಿ ದೊರೆಸ್ವಾಮಿ ಎಂದು ಬಣ್ಣಿಸಿದರು.
ದೊರೆಸ್ವಾಮಿ ಅವರ ಜತೆ ಒಟನಾಟ ಹೆಚ್ಚಾಗಿಲ್ಲ. ಆದರೆ, ದೂರದಿಂದ ನೋಡಿ ಕಲಿತಿದ್ದೇನೆ ಏಕಲವ್ಯನಂತೆ ಎಂದು ಪ್ರಕಾಶ ರೈ ಹೇಳಿದರು.
ಈ ಚುನಾವಣೆಯು ಕರ್ನಾಟಕ ವರ್ಸಸ್ ಮೋದಿ. ಮೋದಿ ಅವರನ್ನು ಪ್ರಧಾನಿ ಗಾದಿಯಿಂದ ಕೆಳಗಿಳಿಸುವ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದು ಎಚ್.ಎಸ್.ದೊರೆಸ್ವಾಮಿ ಹೇಳಿದರು.