janadhvani

Kannada Online News Paper

ಕೊರೋನಾ ಏರಿಕೆ: ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್? – ಇಂದು ಸಿಎಂ ಸಭೆ

ಬೆಂಗಳೂರು: ಏರುತ್ತಿರುವ ಕೊರೊನಾ ರಣಕೇಕೆಯಿಂದ ಕರ್ನಾಟಕದ ಐದು ಜಿಲ್ಲೆಗಳು ಮತ್ತೊಮ್ಮೆ ಲಾಕ್-ಡೌನ್ ಆಗುವ ಸಾದ್ಯತೆಗಳಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಸಂಜೆ ಕೃಷ್ಣಾದಲ್ಲಿ ರಾಜ್ಯದ 7 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮಹತ್ವದ ಸಭೆ ಕರೆದಿದ್ದಾರೆ.

ದಿನದಿಂದ ದಿನಕ್ಕೆ ಬೆಂಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು, ಧಾರವಾಡ ಜಿಲ್ಲೆಗಳಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು ಇವುಗಳನ್ನು ಮುಂದಿಟ್ಟುಕೊಂಡು ಮಹತ್ವದ ವೀಡಿಯೋ ಕಾನ್ಫರೆನ್ಸ್ ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ರಾಜ್ಯದಲ್ಲಿ ಮತ್ತೆ ಲಾಕ್-ಡೌನ್ ಆಗುತ್ತೋ ಇಲ್ಲವೋ ಎಂದು ಇಂದಿನ ಸಭೆ ಬಳಿಕ ತಿಳಿಯಬೇಕಿದೆ.ಅದಾದ ನಂತರ ತಜ್ಞರನ್ನು ಒಳಗೊಂಡ ಮಹತ್ವದ ಸಭೆಯನ್ನು ಸೋಮವಾರ ಕರೆದಿದ್ದು ಆ ಸಭೆಯಲ್ಲಿ ಕರ್ನಾಟಕದ ಕೊರೊನಾ ಲಾಕ್-ಡೌನ್ ಪರಿಸ್ಥಿತಿಯ ಸಂಪೂರ್ಣ ಚಿತ್ರಣ ದೊರಕಲಿದೆ.

ಅಂತೂ ದಕ್ಷಿಣಕನ್ನಡ ಜಿಲ್ಲೆ ಸೇರಿ ರಾಜ್ಯದ 5 ಜಿಲ್ಲೆಗಳು ಲಾಕ್ ಆಗುವ ಪರಿಸ್ಥಿತಿ ಹೆಚ್ಚು. ಸಭೆ ಬಳಿಕ ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೇವೆ ಮತ್ತು ಜನರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸುತ್ತೇವೆ. ಅಲ್ಲದೇ, ರಾಜ್ಯದಲ್ಲಿ ತಡ ಮಾಡದೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಕೊರೊನಾ ನಿಯಂತ್ರಣ, ಲಸಿಕೆ ಸಂಬಂಧ ಪ್ರಮುಖವಾಗಿ ಚರ್ಚೆಯಾಗಲಿದೆ. ಇಂದು ಸಂಜೆ ನಾಲ್ಕು ಗಂಟೆಗೆ ಸಿಎಂ ಗೃಹ ಕಛೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ.

ವಿದೇಶದಲ್ಲಿ ಹೊಸ ರೂಪಾಂತರ ತಳಿ ಪತ್ತೆಯಾಗಿರುವುದರ ಕುರಿತೂ ಮಹತ್ವದ ಚರ್ಚೆ ನಡೆಯಲಿದೆ. ಈ ಸಂಬಂಧ ಸಭೆಯಲ್ಲಿ ಮಹತ್ವದ ಕೆಲ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆ ಇದೆ. ಏರ್ ಪೋರ್ಟ್ ಹಾಗೂ ರಾಜ್ಯದ ಗಡಿ ಭಾಗದಲ್ಲಿ ತೆಗೆದುಕೊಳ್ಳಬೇಕಾದ ‌ಬಿಗಿ ಕ್ರಮಗಳು, ಶಾಲೆಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು, ವಿದೇಶದಿಂದ ಬರುವವರಿಗೆ ಕ್ವಾರಂಟೈನ್ ಮಾಡುವುದು, ಗಡಿ ಭಾಗದಲ್ಲಿ ರಾಜ್ಯಕ್ಕೆ ಬಂದು ಹೋಗುವವರ ಮೇಲೆ ಯಾವ ರೀತಿ ನಿಗಾ ವಹಿಸಬೇಕು ಹೀಗೆ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಲಿದ್ದು, ನಂತರ ನಿಯಮಾವಳಿಗಳನ್ನು ಘೋಷಿಸುವ ಸಾಧ್ಯತೆ ಇದೆ.

error: Content is protected !! Not allowed copy content from janadhvani.com