janadhvani

Kannada Online News Paper

ಹೇಗಿದ್ದ ಹೇಗಾದ: ಎಂಬ ದೊಡ್ಡವರ ಕಥಾನಕಕ್ಕೆ ಇದೊಂದು ಕಥೆ ಸೇರಿಸಿಬಿಡಿ!

✍️ಎ.ಕೆ‌.ನಂದಾವರ

ಬೀಡಿಕಟ್ಟಿ ದಿನದೂಡುವ ಬಡ ಮುಸ್ಲಿಂ ದಂಪತಿ. ನಾಲ್ವರು ಹೆಣ್ಮಕ್ಕಳು. ಒಬ್ಬನೇ ಗಂಡು ಮಗು. ಅದು ಇಪ್ಪತ್ತೈದು ವರ್ಷಗಳ ಹಿಂದಿನ ದಿನಗಳು. ಉನ್ನತಶಿಕ್ಷಣದ ಕನಸು ಕಂಡವರೇ ಕಡಿಮೆ. ಸುತ್ತಮುತ್ತಲಿನ ಹುಡುಗರ ಪೈಕಿ ಹೆಚ್ಚಿನವರು ಐದು-ಆರನೇ ತರಗತಿಗೇ ಶಾಲೆ ಬಿಟ್ಟು ಕೆಲ್ಸಕ್ಕೆ ಸೇರುವುದನ್ನು ಹೆಮ್ಮೆಪಟ್ಟುಕೊಳ್ಳುವವರು. ಅಂದು ಬಹುತೇಕ ಕುಟುಂಬಗಳ ಬದುಕಿ‌ನ ಬಂಡಿ ಸಾಗಿಸಲು ಅದೇ ದಾರಿಯಿದ್ದದ್ದು. ಹುಡುಗನ ಆರನೆ ತರಗತಿಗೇ ಸ್ಕೂಲ್ ಶಿಕ್ಷಣ ಮೊಟಕು. ಮದ್ರಸ ಐದು ಪಾಸಾಗಿ ಆಗಿತ್ತು. ಅಂದಿನ ದಿನಗಳಲ್ಲಿ ಹೆಚ್ಚಿನ ಕಡೆ ಐದನೆ ತರಗತಿ‌ ತನಕ ಮಾತ್ರ ಮದ್ರಸ ಇರುತ್ತಿತ್ತು. ತಾತ, ಅಂದರೆ ತಾಯಿಯ ತಂದೆ ಮೊಮ್ಮಗ ಹುಡುಗನನ್ನು ಸೇರಿಸಿದ್ದು ಪಕ್ಕದ ದರ್ಸ್ ಗೆ‌. ಔಪಚಾರಿಕ ಪಠ್ಯವಸ್ತು ಹೊಂದಿರುವ ಮದ್ರಸ ಶಿಕ್ಷಣದ ಬಳಿಕ ಮಸೀದಿಗಳಲ್ಲೇ ಉಳಿದುಕೊಂಡು ಧಾರ್ಮಿಕ ಜ್ಞಾನ ವ್ಯಾಸಂಗ ಮಾಡುವ ವ್ಯವಸ್ಥೆಗೆ ದರ್ಸ್ ಎನ್ನುವರು. ಮನೆಯಲ್ಲಿ ಬಡತನ ಬೇರೆ. ದರ್ಸ್ ನ ಅಧ್ಯಯನದಲ್ಲಿ‌ ಯಾಕೋ ನಿರಾಸಕ್ತಿ ಮೂಡಿದ್ದರಿಂದ,

ಎಲ್ಲಾದರೂ ಕೆಲ್ಸಕ್ಕೆ ಸೇರೋಣ ಅಂತ ಹುಡುಗ ಮಂಗಳೂರು ನಗರಕ್ಕೆ ಬಸ್ ಹತ್ತಿದ. ಅಂದು ಹೆಚ್ಚಿನ ಹುಡುಗರು ಲುಂಗಿ ಧರಿಸುತ್ತಿದ್ದರು. ಪ್ಯಾಂಟ್ ಬಳಕೆ ಭಾರೀ ಕಡಿಮೆ. ದರ್ಸ್ ವಿದ್ಯಾರ್ಥಿಗಳಿಗಂತೂ ಬಿಳಿಲುಂಗಿ ಸಮವಸ್ತ್ರ. ಮಂಗಳೂರಿನ ಸ್ಟೇಟ್‌ಬ್ಯಾಂಕ್ ಬಳಿಯ ಅಂಗಡಿಗಳ ಸುತ್ತ ಏನಾದಾರೂ ಕೆಲ್ಸ ಕೊಡಿ ಎಂದು ಅಂಗಲಾಚುತ್ತಿದ್ದ; ಹುಡುಗನನ್ನು ಗಮನಿಸಿದ ಅಂಗಡಿಯವನೊಬ್ಬ ಘಟ್ಟದ ಕಡೆಯ ಹೈದನಿರಬೇಕೆಂದು ಭಾವಿಸಿ _’ಏ ಗೌಡ, ಈ ಕಡೆ ಬಾರೋ, ಏನು ಬೇಕು’_ ಎಂದು ಕೇಳಿದ! ಹುಡುಗ ತಕ್ಷಣ ತಬ್ಬಿಬ್ಬಾದ. ಪ್ರಾಚೀನ ಶಾಸನಗಳಲ್ಲಿ ಆಡಳಿತ ಸೂಚಕಪದವಾಗಿರುವ ಗೌಡ ಎಂಬುದು ಕಾಲಾಂತರದಲ್ಲಿ ರೈತ, ಕೃಷಿಕ ಎಂಬರ್ಥದಲ್ಲಿ ಬಳಕೆಯಾಗುತ್ತಿದ್ದದ್ದು ಇಂದು ಜಾತಿಸೂಚಕವಾಗಿ ಬಳಕೆಯಲ್ಲಿದೆ.

ಆದರೆ ಮಲೆನಾಡು, ಕರ್ನಾಟಕದ ಉತ್ತರ ಮೈದಾನ ಪ್ರದೇಶಗಳಿಂದ ನಮ್ಮ ಕರಾವಳಿಯ ಕಡೆಗೆ ವ್ಯಾಪಾರಕ್ಕೋ ಕೂಲಿ ಕೆಲಸಕ್ಕೋ ವಲಸೆ ಬರುವ ಗ್ರಾಮ್ಯ ಕನ್ನಡ ಭಾಷಿಕರೆಲ್ಲರೂ ಕರಾವಳಿಯ ಜನಸಾಮಾನ್ಯರ ಪಾಲಿಗೆ ಗೌಡರೇ! ಹುಡುಗನಿಗೆ ಅದೇ ಅವಮಾನವಾಗಿತ್ತು. ತನ್ನನ್ನು ವಲಸೆ ಕಾರ್ಮಿಕನೆಂದು ಅರ್ಥೈಸುವ ಮಟ್ಟಕ್ಕೆ ತನ್ನ ವೇಷಭೂಷಣ ಇದೆಯೇ ಎಂಬ ಜಿಜ್ಞಾಸೆ ಹುಟ್ಟಿ, ಹುಡುಗ ಕೆಲ್ಸನೂ ಬೇಡ ಸಿಟಿನೂ ಬೇಡ ಅಂತ ಮರಳಿ ದರ್ಸ್ ಕಡೆಗೆ ಬಸ್ ಹತ್ತಿದ. ದರ್ಸ್ ಶಿಕ್ಷಣ ಮುಂದುವರಿಸಿ, ಬಳಿಕ ಪ್ರಸಿದ್ಧ ಅರಬಿ ಕಾಲೇಜಿಗೆ ಉನ್ನತ ವ್ಯಾಸಂಗಕ್ಕೆ ಸೇರಿ, ಪದವೀಧರನಾಗಿ ಯುವವಿದ್ವಾಂಸನಾಗಿ ಹೊರಬಂದಾಗ ಏಕೈಕ ಸಹೋದರನ ಸ್ಥಾನದಲ್ಲಿ ನಿಂತು, ಸಹೋದರಿಯರನ್ನು ಮನೆದಾಟಿಸುವ ಜವಾಬ್ದಾರಿಯಿತ್ತು! ಮಸೀದಿಯೊಂದರಲ್ಲಿ ಮುದರ್ರಿಸ್ ಆಗಿ, ಬಳಿಕ ಅಲ್ಲಿಂದ ಮಹಾನಗರಕ್ಕೆ ಕಾಲಿಟ್ಟದ್ದು ದೊಡ್ಡ ಕನಸಿನೊಂದಿಗೆ! ಮನೆಯ ಜವಾಬ್ದಾರಿಯನ್ನು ನಿಭಾಯಿಸುವ ಜೊತೆಜೊತೆಗೆ ಸಾಮಾಜಿಕ ಕನಸಿನ ಬೆನ್ನ ಹಿಂದೆ ಓಡಾಟ. ನಂತರ ದೊಡ್ಡವರ ಸಂಪರ್ಕ! ಏರುಪೇರು ಹಲವು ದಾಟಿದೆ!
ಈಗ ಆ ಹುಡುಗ ಕರ್ನಾಟಕ ರಾಜ್ಯ ವಖ್ಫ್ ಬೋರ್ಡ್ ಅಧ್ಯಕ್ಷ!

ಆರನೇ ತರಗತಿ ತನಕ ಮಾತ್ರ ಔಪಚಾರಿಕ ಶಿಕ್ಷಣ ಪಡೆದಿರುವ ಅವರು ನಾಲ್ಕಾರು ಭಾಷೆಗಳಲ್ಲಿ ಲೀಲಾಜಾಲವಾಗಿ ವ್ಯವಹರಿಸಬಲ್ಲ ಯುವವಿದ್ವಾಂಸ. ರಾಜ್ಯಾದ್ಯಂತ ಓಡಾಡಿ ವಿಭಿನ್ನತೆಗಳನ್ನು ಕಣ್ಣಾರೆ ಕಂಡವರು. ಆದುದರಿಂದಲೇ ರಾಜ್ಯ ವಖ್ಫ್ ಅಧ್ಯಕ್ಷ ಸ್ಥಾನಕ್ಕೆ ಅವರು ಅರ್ಹರು.

ಅಂದ ಹಾಗೆ ಅವರ ಬಾಲ್ಯ, ಆಟ-ತುಂಟಾಟ, ಮದ್ರಸ, ಸ್ಕೂಲ್ ಎಲ್ಲಾ ನಂದಾವರದಲ್ಲಿ. ಮೊದಲ ದರ್ಸ್ ಶಿಕ್ಷಣ ಪಾಣೆಮಂಗಳೂರು ಆಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ. ನಂತರ ಚೆರುವತ್ತೂರು-ತುರುತ್ತಿ. ಉನ್ನತ ವ್ಯಾಸಂಗ ಕಾಸರಗೋಡು ಜಾಮಿ‌ಅ ಸ‌ಅದಿಯದಲ್ಲಿ. ಮೊದಲ ಸೇವೆ ವೇಣೂರು ಸಮೀಪ ಉಳ್ತೂರು ಜುಮಾಮಸೀದಿಯಲ್ಲಿ. ಬಳಿಕ, ಮಹಾನಗರ ಬೆಂಗಳೂರು.

_’ಹೇಗಿದ್ದ‌… ಹೇಗಾದ’_ ಎಂಬ ದೊಡ್ಡವರ ಕಥಾನಕ ಸಂಗ್ರಹಿಸುವ ಹಾಗೂ ಪ್ರಚುರಪಡಿಸುವ, ಆ ಮೂಲಕ ಮೋಟಿವೇಶನ್ ಮಾಡಬಯಸುವವರಿಗಾಗಿ ಈ ಕಥೆ ಹೇಳಿದೆ ಅಷ್ಟೇ!
ಪಕ್ಷ-ಸಂಘಟನೆ-ಸಿದ್ಧಾಂತ-ಕುಂದು-ಕೊರತೆ ಗಳ ಬಗ್ಗೆ ಚರ್ಚೆ ಮಾಡಲು ಆಸಕ್ತಿ ಇರುವವರು ಚರ್ಚೆ ಮಾಡಲು ಸ್ವತಂತ್ರರು. ಅಂತಹ ಚರ್ಚೆಗಳಿಗೆ ವೈಯಕ್ತಿಕವಾಗಿ ನನ್ನ ವಿರೋಧವಿಲ್ಲ! ಅಧ್ಯಕ್ಷ ಸ್ಥಾನಕ್ಕೆ ಅರ್ಹರಾದರವರು ಪ್ರಶ್ನಾತೀತರೆಂಬ ವಾದ ನನಗಿಲ್ಲ.

error: Content is protected !! Not allowed copy content from janadhvani.com