ರಿಯಾದ್: ಇಸ್ರೇಲ್ ಗೆ ಸ್ವಂತ ಭೂಮಿ ಹೊಂದಲು ಹಕ್ಕಿದೆ ಎಂದು ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿಕೆ ನೀಡಿದ ಬೆನ್ನಲ್ಲೇ, ಪ್ಯಾಲೇಸ್ತೀನಿಗೆ ತನ್ನ ಬೆಂಬಲವನ್ನು ಮುಂದುವರಿಸುವುದಾಗಿ ಸೌದಿ ಆಡಳಿತಾಧಿಕಾರಿ ದೊರೆ ಸಲ್ಮಾನ್ ವ್ಯಕ್ತಪಡಿಸಿದ್ದಾರೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರೊಂದಿಗೆ ಮಾತುಕತೆ ನಡೆಸಿದ ದೊರೆ ಸಲ್ಮಾನ್ ಇಸ್ರೇಲ್-ಪ್ಯಾಲೇಸ್ತೀನ್ ಶಾಂತಿ ಮಾತುಕತೆಗಳನ್ನು ಚುರುಕುಗೊಳಿಸಲು ಒತ್ತಾಯಿಸಿದರು. ಗಾಝಾದಲ್ಲಿ ಉಂಟಾದ ಸಂಘರ್ಷದಲ್ಲಿ 16 ಪ್ಯಾಲೇಸ್ಟಿನಿಯನ್ ನಾಗರಿಕರು ಸಾವನ್ನಪ್ಪಿದ ಹಿನ್ನಲೆಯಲ್ಲಿ ಸಲ್ಮಾನ್ ಟ್ರಂಪ್‌ರೊಂದಿಗೆ ಮಾತುಕತೆ ನಡೆಸಿದರು.
ಜೆರುಸಲೇಮನ್ನು ರಾಜಧಾನಿಯನ್ನಾಗಿಸಿ ಸ್ವತಂತ್ರ ದೇಶವನ್ನಾಗಿಸುವ ಫೆಲಸ್ತೀನ್ ನಾಗರಿಕರ ಹಕ್ಕನ್ನು ಸೌದಿ ಅರೇಬಿಯಾವು ಬೆಂಬಲಿಸುವುದನ್ನು ಮುಂದುವರಿಸಿದೆ, ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ದೊರೆ ಸಲ್ಮಾನ್ ಹೇಳಿಕೆ ನೀಡಿರುವುದಾಗಿ ಸೌದಿಯ ಅಧಿಕೃತ ವಾರ್ತಾ ಏಜೆನ್ಸಿ ಎಸ್.ಪಿ.ಎ ಹೊರಡಿಸಿದ ವಾರ್ತಾ ಪ್ರಕಟನೆಯಲ್ಲಿ ತಿಳಿಸಿದೆ.
ಸಲ್ಮಾನ್ ರಾಜರ ಪ್ರಸ್ತಾವವನ್ನು ಸ್ವಾಗತಿಸಿದ ಪ್ಯಾಲೇಸ್ತೀನಿಯನ್ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ತಮ್ಮ ದೇಶದ ಬೆಂಬಲಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಿದರು.
ಮೊಹಮ್ಮದ್ ಬಿನ್ ಸಲ್ಮಾನ್, ಅಮೆರಿಕಾದ ಮಾಸ ಪತ್ರಿಕೆ ಅಟ್ಲಾಂಟಿಕ್ ಗೆ ನೀಡಿದ ಸಂದರ್ಶನವೊಂದರಲ್ಲಿ ಇಸ್ರೇಲ್‌ಗೆ ಭೂಮಿ ಹೊಂದಲು ಹಕ್ಕಿದೆ ಎಂದು ಘೋಷಿಸಿದರು. ಇಸ್ಲಾಂ ಧರ್ಮದ ಜನ್ಮದೇಶ ಮತ್ತು ಪವಿತ್ರ ಮಕ್ಕಾ ನಗರ ಇರುವ ಸೌದಿ ಅರೇಬಿಯಾ, ಇಷ್ಟರ ವರೆಗೆ ಇಸ್ರೇಲ್ ಎಂಬ ರಾಷ್ಟ್ರವನ್ನು ಅಂಗೀಕರಿಸಲಿಲ್ಲ. ಆದರೆ ಸೌದಿ ಅರೇಬಿಯಾ ಮತ್ತು ಇರಾನ್ ನಡುವೆ ಸಂಬಂಧವು ದಿನೇ ದಿನೇ ಕೆಡುತ್ತಿರುವ ವೇಳೆ ಇರಾನನ್ನು ಎದುರಿಸಲು ಇಸ್ರೇಲ್ ಮತ್ತು ಸೌದಿ ಅರೇಬಿಯಾ ಗೆಳೆತನ ಸಾಧಿಸುವ ಸಂಭವವಿದೆ ಎಂದು ನಿರೀಕ್ಷಿಸಲಾಗುತ್ತಿದೆ.