janadhvani

Kannada Online News Paper

ಕೇರಳದಲ್ಲಿ ಪ್ರವಾಹ: 6 ಮಂದಿ ಬಲಿ- 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಕೇರಳದ ರಸ್ತೆಗಳು ಸಂಪೂರ್ಣ ನೀರಿನಿಂದ ಆವೃತವಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ.

ತಿರುವನಂತಪುರ: ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಇತರ ಹಾನಿಯಲ್ಲಿ ಆರು ಜನರು ಮೃತಪಟ್ಟಿದ್ದಾರೆ. 15 ಮಂದಿ ಕಾಣೆಯಾಗಿದ್ದಾರೆ.

ಕೇರಳದಲ್ಲಿ ಐದಾರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಅರ್ಧ ರಾಜ್ಯವೇ ನೀರಿನಿಂದ ಆವರಿಸಿಕೊಂಡಿದೆ. 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇರಳದ ರಸ್ತೆಗಳು ಸಂಪೂರ್ಣ ನೀರಿನಿಂದ ಆವೃತವಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಹಲವು ಡ್ಯಾಂಗಳ ಗೇಟುಗಳನ್ನು ತೆರೆಯಲಾಗಿದೆ.

ರಾಜ್ಯದ ಕೊಟ್ಟಾಯಂನ ಚೋಳತಡಂ ಕೂಟಿಕಲ್ ಗ್ರಾಮದ ಪ್ಲಾಪಲ್ಲಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಮೂರು ಮನೆಗಳು ಕೊಚ್ಚಿ ಹೋಗಿವೆ. ಕಾಣೆಯಾದ ಹತ್ತು ಜನರ ಪೈಕಿ ನಾಲ್ವರ ಮೃತದೇಹ ಪತ್ತೆಯಾಗಿದೆ. ಇಡುಕ್ಕಿ ಕಂಜಾರ್ ನಲ್ಲಿ ಭಾರೀ ಮಳೆಗೆ ಕಾರು ಕೊಚ್ಚಿಹೋಗಿದೆ. ಕಾರಿನಲ್ಲಿದ್ದ ಇಬ್ಬರ ಮೃತದೇಹ ಪತ್ತೆಯಾಗಿದೆ.

ಪೂಂಜಾರ್ ನಲ್ಲಿ ಕೇರಳ ಸರ್ಕಾರಿ ನಿಗಮದ ಬಸ್ ಮುಳುಗಡೆ ಆಗಿದೆ.ಜನಜೀವನ ಅಸ್ತವ್ಯಸ್ತಗೊಂಡಿದೆ.ಮುಂದಿನ 24 ಗಂಟೆಗಳಲ್ಲಿ ಕೇರಳದಲ್ಲಿ ಇನ್ನಷ್ಟು ಧಾರಾಕಾರ ಮಳೆ ಆಗುವ ಮುನ್ನೆಚ್ಚರಿಕೆ ನೀಡಲಾಗಿದೆ. ಪಥನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತಿರುವನಂತಪುರಂ, ಕೊಲ್ಲಂನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕೇರಳ ರಾಜ್ಯದ ಬಹುತೇಕ ಎಲ್ಲ ಡ್ಯಾಂಗಳ ಎಲ್ಲ ಗೇಟ್‍ಗಳನ್ನೂ ತೆರೆಯಲಾಗುತ್ತಿದ್ದು, ಪಂಪಾ ನದಿಗೆ ಇಳಿಯದಂತೆ ಶಬರಿಮಲೆಗೆ ಭಕ್ತರಿಗೆ ಸೂಚಿಸಲಾಗಿದೆ.ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಕಾರಣ, ಮುಂದಿನ 24 ಗಂಟೆ ರಾಜ್ಯದ ವಿವಿಧೆಡೆ ವ್ಯಾಪಕ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

error: Content is protected !! Not allowed copy content from janadhvani.com