janadhvani

Kannada Online News Paper

ಜಲಸಮಾಧಿಯಾಗುತ್ತೇನೆ ಎಂದಿದ್ದ ಸ್ವಾಮೀಜಿಗೆ ಗೃಹ ಬಂಧನ

ಅಯೋಧ್ಯೆ, ಅ.2|ಅಯೋಧ್ಯೆಯ ಪ್ರಸಿದ್ಧ ಸ್ವಾಮೀಜಿ ಜಗದ್ಗುರು ಪರಮಹಂಸ ಮಹಾರಾಜ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ವರದಿಯಾಗಿದೆ. ಅವರು ಅಕ್ಟೋಬರ್ 2 ರೊಳಗೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿದ್ದರೆ ಜಲ ಸಮಾಧಿಯಾಗುತ್ತೇನೆ ಎಂದು ಬೆದರಿಕೆ ಹಾಕಿದ್ದು, ಇಂದು ಜಲ ಸಮಾಧಿಗೆ ಸಿದ್ಧರಾಗುತ್ತಿದ್ದರು ಎನ್ನಲಾಗಿದೆ.

ಅಕ್ಟೋಬರ್ 2 ರೊಳಗೆ ಭಾರತವು ತನ್ನನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿದ್ದರೆ, ಸರಯೂ ನದಿಯಲ್ಲಿ ಜಲ ಸಮಾಧಿ ಆಗುವೆನು ಎಂದು ಮಹಾರಾಜ್ ಈ ವಾರದ ಆರಂಭದಲ್ಲಿ ಘೋಷಿಸಿದ್ದರು. ಈ ಹಿಂದೆ ಅವರು ಎಲ್ಲಾ ಭಾರತೀಯ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಪೌರತ್ವವನ್ನು ಅಧಿಕೃತವಾಗಿ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು.

ಪರಮಹಂಸ ಅವರನ್ನು ಹಿಂದೂ ಮಹಾಸಭಾ ಕೂಡಾ ಬೆಂಬಲಿಸಿದ್ದು, ಅಕ್ಟೋಬರ್ 2 ರಂದು ಒಂದು ಲಕ್ಷ ಕಾರ್ಯಕರ್ತರು ಅಯೋಧ್ಯೆಯ ಸರಯೂ ನದಿಯಲ್ಲಿ ಜಲಸಮಾಧಿ ಆಗುತ್ತೇವೆ ಎಂದು ಹೇಳಿದ್ದರು. ಹೀಗಾಗಿ ಸ್ಥಳದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಬೆಳಿಗ್ಗೆಯಿಂದಲೇ ಆಶ್ರಮದಲ್ಲಿ ಹೋಮ-ಹವನಗಳನ್ನು ಮಾಡಿದ್ದ ಪರಮಹಂಸ ಅವರು, ಹನ್ನೆರೆಡು ಗಂಟೆಗೆ ಜಲಸಮಾಧಿ ಆಗುವುದಾಗಿ ಹೇಳಿದ್ದರು. ಅದರೊಳಗೆ ಒಕ್ಕೂಟ ಸರ್ಕಾರದ ಪ್ರತಿನಿಧಿ ತನ್ನ ಬೇಡಿಕೆಯ ಬಗ್ಗೆ ಆಸ್ವಾಸನೆ ನೀಡುತ್ತಾರೆ ಎಂದು ನನಗೆ ಭರವಸೆ ಇದೆ ಎಂದು ತಿಳಿಸಿದ್ದರು.

ಆದರೆ ಪೊಲೀಸರು ಅವರನ್ನು ಗೃಹ ಬಂಧನದಲ್ಲಿ ಇಟ್ಟಿದ್ದರು.

ಈ ಬಗ್ಗೆ ಪ್ರತಿಕ್ರಿಸಿದ ಅವರು, “ನಾನು ಜಲಸಮಾಧಿ ಆಗುತ್ತೇನೆ ಎಂದು ಸರ್ಕಾರ ನನ್ನನ್ನು ಗೃಹ ಬಂಧನದಲ್ಲಿ ಇಟ್ಟಿದೆ. ಬಿಡುಗಡೆ ಮಾಡಿದರೆ ತಾನು ಜಲ ಸಮಾಧಿ ಆಗುತ್ತೇನೆ. ಆದರೂ ನಾನು ಸರಯೂ ನದಿಯಿಂದ ನೀರನ್ನು ತಂದಿದ್ದೇನೆ. ಹನ್ನೆರೆಡು ಗಂಟೆಗೆ ಇದರಲ್ಲಿ ಮೂಗು ಮುಳುಗಿಸಿ ಜಲಸಮಾಧಿ ಆಗುತ್ತೇನೆ. ಭಗವಂತನ ಇಚ್ಛೆ ಇದ್ದರೆ ಇದರಲ್ಲಿ ಸಫಲನಾಗುತ್ತೇನೆ” ಎಂದು ಸಣ್ಣ ನೀರಿನ ಕ್ಯಾನ್‌ ಅನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ!.

ಆದರೆ ಸರ್ಕಾರ ಅವರ ಗೃಹ ಬಂಧನವನ್ನು ಮುಂದುವರೆಸಿದೆ. ಬಗ್ಗೆ ಮತ್ತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪರಮಹಂಸ ಅವರು, “ಸರ್ಕಾರ ನನ್ನನ್ನು 1 ವರ್ಷ ಗೃಹಬಂಧನದಲ್ಲಿರಿಸಿದರೂ, ನಾನು ಹೊರಬಂದ ತಕ್ಷಣ ಜಲಸಮಾಧಿ ಆಗುತ್ತೇನೆ” ಎಂದು ಅವರು ಹೇಳಿದ್ದಾರೆ.


ಕೆಲವು ತಿಂಗಳ ಹಿಂದೆ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕೆಂದು ಒತ್ತಾಯಿಸಿ ಸ್ವಯಂ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಸಿದ್ದರಾಗಿದ್ದು, ಈ ಸಂದರ್ಭದಲ್ಲಿ ಅಯೋಧ್ಯೆ ಪೊಲೀಸರು ಆಚಾರ್ಯ ಪರಮಹಂಸರನ್ನು ತಡೆದು ಗೃಹಬಂಧನದಲ್ಲಿ ಇರಿಸಿದ್ದರು ಎಂದು ವರದಿ ತಿಳಿಸಿದೆ.

ಬಳಿಕ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕೆಂದು ಆಗ್ರಹಿಸಿ 15 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದು, ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶಿಸಿ, ಭರವಸೆ ನೀಡಿದ ನಂತರ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿರುವುದಾಗಿ ವರದಿ ವಿವರಿಸಿದೆ.

error: Content is protected !! Not allowed copy content from janadhvani.com