janadhvani

Kannada Online News Paper

ಬೆಂಗಳೂರು: ಮತ್ತೊಂದು ಘೋರ ದುರಂತ- ನಿಗೂಢ ಸ್ಪೋಟಕ್ಕೆ ಮೂವರು ಸಾವು

ಬೆಂಗಳೂರು: ನಗರದ ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಹೊತ್ತಿಕೊಂಡು ಇಬ್ಬರು ಮೃತಪಟ್ಟ ಪ್ರಕರಣ ಹಸಿರಾಗಿರುವಾಗಲೇ ಇದೀಗ ಮತ್ತೊಂದು ಘೋರ ದುರಂತ ಸಂಭವಿಸಿದೆ. ಚಾಮರಾಜಪೇಟೆಯ ಲಾರಿ ಸರ್ವೀಸ್ ಗೋಡೌನ್ ನಲ್ಲಿ ಸ್ಪೋಟ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ, ಸ್ಫೋಟದ ತೀವ್ರತೆಗೆ ಮೃತಪಟ್ಟವರ ದೇಹಗಳು ಛಿದ್ರವಾಗಿವೆ. ಚಾಮರಾಜಪೇಟೆಯಲ್ಲಿ ಸ್ಫೋಟವಾಗಿದ್ದು ಏನು..? ಸಿಲಿಂಡರ್​​ ಬ್ಲಾಸ್ಟ್​​ ಆಗಿಲ್ಲ..ಕಂಪ್ರೆಸರ್​ ಸ್ಫೋಟಿಸಿಲ್ಲ ಶಾರ್ಟ್​ ಸರ್ಕೂಟ್​ನಿಂದಲೂ ಬೆಂಕಿ ಹೊತ್ತಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿ ಸ್ಫೊಟಗೊಂಡಿರುವುದು ಏನು ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ.

ಸ್ಫೋಟಕ ಸ್ಫೋಟಿಸಿರೋ ಮಾಹಿತಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸುತ್ತಿದ್ದಾರೆ. ಈ ಸ್ಪೋಟದಲ್ಲಿ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಮರಾಜಪೇಟೆಯ ರಾಯನ್ ಸರ್ಕಲ್ ಬಳಿಯ ಪತ್ರಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋಡೌನ್ ನಲ್ಲಿ ಸ್ಫೊಟ ಸಂಭವಿಸಿದೆ. ಸ್ಫೋಟಕ್ಕೆ ಗೋಡೌನ್ ಬಳಿ ನಿಲ್ಲಿಸಿದ್ದ 15 ಕ್ಕೂ ಹೆಚ್ಚು ಬೈಕ್ ಗಳು ಛಿದ್ರವಾಗಿವೆ. ಸ್ಫೋಟದಲ್ಲಿ ಅಸ್ಲಮ್​​, ಫಯಾಜ್​​, ಮನೋಹರ್​ ಸಾವನ್ನಪ್ಪಿದ್ದರೆ ನಾಲ್ವರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಇನ್ನೂ ಈ ಬಗ್ಗೆ ದಕ್ಷಿಣ ವಿಭಾಗ ಡಿಸಿಪಿ ಹರೀಶ್​ ಪಾಂಡೆ ಮಾಹಿತಿ ನೀಡಿದ್ದು, ಒಂದು ಬಾಕ್ಸ್​ ಬಿಟ್ಟರೆ ಬೇರೆ ಬಾಕ್ಸ್ ಗಳಲ್ಲಿರುವ ಪಟಾಕಿ ಸಿಡಿದಿಲ್ಲ, FSL ತಂಡ ಪರಿಶೀಲನೆ ಮಾಡಿದ ನಂತರ ಸ್ಫೋಟಕ್ಕೆ ನಿಖರ ಕಾರಣ ಗೊತ್ತಾಗುತ್ತದೆ. ಲಾರಿ ಪಂಕ್ಚರ್​​ ಶಾಪ್​​ ಪಕ್ಕದಲ್ಲೇ ಪಟಾಕಿ ಗೋಡೌನ್​​ ಇತ್ತು, 60 ಪಟಾಕಿ ಬಾಕ್ಸ್​ಗಳು ಸದ್ಯ ಕಾಣಿಸುತ್ತಿವೆ, ಇದರಲ್ಲಿ ಒಂದೆರಡು ಪಟಾಕಿ ಬಾಕ್ಸ್ ಮಾತ್ರ ಸಿಡಿದಿದೆ..? ಟ್ರಾನ್ಸ್​ಪೋರ್ಟ್ ಗೋದಾಮಿನಲ್ಲಿ ಪಟಾಕಿ ಸಂಗ್ರಹ ಮಾಹಿತಿ ಇದೆ. ಈ ಪಟಾಕಿಯನ್ನು ಹೇಗೆ ತಂದ್ರು… ಪರ್ಮಿಷನ್​​ ಇತ್ತಾ ಎಂಬ ಕುರಿತು ಪರಿಶೀಲಿಸುತ್ತೇವೆ ಎಂದು ಡಿಸಿಪಿ ಹರೀಶ್​ ಪಾಂಡೆ ತಿಳಿಸಿದ್ದಾರೆ.

error: Content is protected !! Not allowed copy content from janadhvani.com