janadhvani

Kannada Online News Paper

ಮಕ್ಕಳಲ್ಲಿ ಹೆಚ್ಚಾಗಿರುವ ವೈರಲ್ ಜ್ವರ: ಕೊರೋನಾ ಪರೀಕ್ಷೆ ಅಗತ್ಯವಿಲ್ಲ

ಬೆಂಗಳೂರು- ಮಕ್ಕಳಲ್ಲಿ ಇತ್ತೀಚೆಗೆ ಹೆಚ್ಚಾಗಿ ವೈರಲ್ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಮತ್ತು ಡೆಂಗ್ಯು ಜ್ವರದ ಲಕ್ಷಣಗಳೇ ಕಂಡುಬರುತ್ತಿದ್ದು ಮಕ್ಕಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬರುತ್ತಿದೆ. ಹಾಗಾದರೆ ಇದು ಕೊರೋನಾ ರೂಪಾಂತರಿಯೇ ಎಂಬ ಸಂಶಯ, ಭಯ ಸಾರ್ವಜನಿಕರನ್ನು ಕಾಡುತ್ತಿದೆ.

ಸಾಮಾನ್ಯವಾಗಿ ಮಳೆಗಾಲ, ಚಳಿಗಾಲ, ಬೇಸಿಗೆಕಾಲಗಳಲ್ಲಿ ಋತುಗಳು ಬದಲಾದಾಗ ಶೀತ, ನೆಗಡಿ- ಜ್ವರ ಬರುವುದು ಸಾಮಾನ್ಯ. ಆದರೆ ಇತ್ತೀಚೆಗೆ ಬರುತ್ತಿರುವ ಜ್ವರ ಅದರಲ್ಲೂ ಮಕ್ಕಳಲ್ಲಿ ಮಾತ್ರ ದೀರ್ಘಕಾಲ ಇದೆ.

ಶಿಶುಗಳಿಂದ ಹಿಡಿದು 5 ವರ್ಷದವರೆಗೆ ಮಕ್ಕಳಲ್ಲಿ ಇತ್ತೀಚೆಗೆ ವೈರಲ್ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಅಧಿಕ ಜ್ವರ, ಸುಸ್ತು, ಕಫ, ಶೀತ ಮತ್ತು ವಾಂತಿಯ ಸಮಸ್ಯೆಗಳು ಕಾಣಿಸುತ್ತಿವೆ. ಆದರೆ ಕೊರೋನಾ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬರುತ್ತಿದೆ. ಉಸಿರಾಟದ ಸಿನ್ಸಿಟಿಯಲ್ ವೈರಸ್, ಎಚ್ 1 ಎನ್ 1 ಅಥವಾ ಚಿಕೂನ್ ಗುನ್ಯಾದಂತಹ ಕೆಲವು ಋತುಗಳ ವೈರಸ್ ಗಳು ಕೂಡ ಕಾಡುತ್ತಿವೆ.

ಹಾಗಾದರೆ ಏನಿದು ಎಂಬ ಭಯ, ಆತಂಕ ಕೊರೋನಾ ಮಧ್ಯೆ ಜನರನ್ನು ಸಾಕಷ್ಟು ಕಾಡುತ್ತಿದೆ. ಜನರು ಆತಂಕಪಡುವ ಅಗತ್ಯವಿಲ್ಲ. ಮಕ್ಕಳಲ್ಲಿ ಅಸಾಮಾನ್ಯ ರೋಗಲಕ್ಷಣ, ಕೊರೋನಾ ಲಕ್ಷಣ ಕಂಡುಬರದ ಹೊರತು ಅನಗತ್ಯವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಬೇಡ ಎಂದು ವೈದ್ಯರು ಹೇಳುತ್ತಾರೆ.

ಜ್ವರದಂತಹ ವಿಶಿಷ್ಟ ಲಕ್ಷಣವು ಮೂರು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ಅಥವಾ ಸಮಯ ಭಿನ್ನವಾಗಿದ್ದರೆ ಅಥವಾ ನಿರ್ದಿಷ್ಟ ಪ್ರದೇಶದ ಮಕ್ಕಳು ಇದೇ ರೀತಿ ತೋರಿಸುತ್ತಿದ್ದರೆ ರೋಗಲಕ್ಷಣಗಳನ್ನು ಹೊಂದಿದ್ದರೆ ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹೇಳಿದ್ದಾರೆ.

ಇದು ಹಳೆ ವೈರಸ್:

ಯಾವುದೇ ಅಸಾಮಾನ್ಯ ಲಕ್ಷಣಗಳಿದ್ದಲ್ಲಿ, ಆಣ್ವಿಕ ಪರೀಕ್ಷೆಗಳು, ಸ್ವ್ಯಾಬ್ ಸಂಗ್ರಹಗಳು, ವೈರಸ್ ಕಲ್ಚರ್ ಇತ್ಯಾದಿಗಳನ್ನು ನೋಡಲು ಪರೀಕ್ಷೆ ಮಾಡಬೇಕಾಗುತ್ತದೆ.

ಕನಿಷ್ಟ 50-60 ಮಕ್ಕಳನ್ನು ವೈರಲ್ ಜ್ವರ ಮತ್ತು ಸೋಂಕು ರೋಗಲಕ್ಷಣಗಳನ್ನು ನೋಡಿದ್ದೇವೆ, ಆದರೆ ಇವುಗಳಲ್ಲಿ ಶೇಕಡಾ 40ರಷ್ಟು ಮಕ್ಕಳಲ್ಲಿ ಋತು ಸಂಬಂಧಿ ವೈರಸ್ ಜ್ವರಗಳೇ ಕಾಣಿಸುತ್ತಿವೆ.ಇದರ ಬಗ್ಗೆ ಆತಂಕ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ಕೇವಲ ಕಾಲ ಅಥವಾ ಋತು ಸಂಬಂಧಿ ಜ್ವರ ಎಂದು ಹೇಳುವ ಡಾ ರೋಹಿಣಿ ಕೆಲ್ಕರ್, ಹಳೆ ವೈರಸ್ ಹೊಸದಾಗಿ ಕಾಣಿಸಿಕೊಂಡಿದೆಯಷ್ಟೆ.ಸಾರ್ವಜನಿಕರು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ತಜ್ಞರ ಸಮಿತಿ ಹೇಳಿದೆ.

error: Content is protected !! Not allowed copy content from janadhvani.com