janadhvani

Kannada Online News Paper

ಬ್ಲಡ್‌ ಡೋನರ್ಸ್‌ ಫಾರಂ, ಎ.ಜೆ. ಆಸ್ಪತ್ರೆ ಸಹಯೋಗದಿಂದ ಕಲ್ಲಡ್ಕದಲ್ಲಿ ರಕ್ತದಾನ ಶಿಬಿರ

ಬಂಟ್ವಾಳ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಹಾಗೂ ಮರ್ಹೂಂ ರಫೀಕ್‌ ಅಮರ್‌ ಸ್ಮರಣಾರ್ಥ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಕಲ್ಲಡ್ಕದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಪ್ಯುಲರ್‌ ಫ್ರಂಟ್‌ ಬ್ಲಡ್‌ ಡೋನರ್ಸ್ ಫಾರಂ ಕಲ್ಲಡ್ಕ ಅಧ್ಯಕ್ಷರಾದ ಹಮೀದ್‌ ಅಲಿ, ರಕ್ತದಾನದ ಮಹತ್ವಗಳನ್ನು ಜನರೆದುರು ಮುಂದಿಟ್ಟರು.
ಪ್ರಾಸ್ತಾವಿವಾಗಿ ಮಾತನಾಡಿದ ಪಾಪ್ಯುಲರ್‌ ಫ್ರಂಟ್‌ ಕಲ್ಲಡ್ಕ ಡಿವಿಶನ್‌ ಅಧ್ಯಕ್ಷ ಅಬೂಬಕರ್‌ ಸಿದ್ದೀಕ್‌, “ನಮ್ಮನ್ನು ಅಗಲಿದ ನಮ್ಮ ಸ್ನೇಹಿತರಿಗೆ ನಾವೇನಾದರೂ ಮಾಡಬೇಕೆಂದಾದರೆ ರಕ್ತದಾನಕ್ಕಿಂತ ಉತ್ತಮವಾದುದು ಬೇರೆ ಇಲ್ಲ. ನಾವು ನಮ್ಮ ಸುತ್ತಲಿನ ವ್ಯಕ್ತಿಗಳೊಂದಿಗೆ ಸ್ನೇಹ, ಪ್ರೀತಿ ಬೆಳೆಸಬೇಕು. ನಮ್ಮ ಮಕ್ಕಳನ್ನು ಉತ್ತಮ ಸಂಸ್ಕಾರವಂತರಾಗಿ ಬೆಳೆಸಬೇಕು. ಇದುವೇ ನಾವು ಸಮಾಜಕ್ಕೆ ನೀಡುವ ಕೊಡುಗೆ” ಎಂದರು.

ಬೀಡಿ ಕಾರ್ಮಿಕರ ಕಲ್ಯಾಣ ಸಂಚಾರಿ ಮತ್ತು ಸ್ಥಿರ ಆಸ್ಪತ್ರೆಯ ವೈದ್ಯೆಯಾಗಿರುವ ಡಾ. ಆಯಿಶಾ ಮಾತನಾಡಿ ರಕ್ತದಾನ ಮಾಡಲಿಕ್ಕಿರುವ ಅರ್ಹತೆ ಮತ್ತು ರಕ್ತದಾನದಿಂದಾಗುವ ಪ್ರಯೋಜನಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಕೋವಿಡ್‌ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಜನರ ಯೋಗಕ್ಷೇಮ ನೋಡಿಕೊಂಡ ಆಶಾ ಕಾರ್ಯಕರ್ತೆಯರನ್ನು ಹಾಗೂ ಅರೋಗ್ಯ ಸಹಾಯಕಿಯರನ್ನು ಸನ್ಮಾನಿಸಲಾಯಿತು.

ಗೋಳ್ತಮಜಲು ಅಂಗನವಾಡಿಯಲ್ಲಿ ಮೂವತ್ತು ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿದ ಜಯಂತಿ ಟೀಚರ್, ಪದವೀಧರನಾಗಿದ್ದರೂ ತನಗೆ ದಕ್ಕಿದ ಪೇಪರ್ ವೃತ್ತಿಯನ್ನು ನಿಕೃಷ್ಟವಾಗಿ ಕಾಣದೆ ನಿಷ್ಠೆಯಿಂದ ನಿರ್ವಹಿಸಿದ 30ವರ್ಷಗಳವರೆಗೆ ಪೇಪರ್ ಹಂಚುತ್ತಿದ್ದ ಮೋನುಞಾಕರವರನ್ನು ಸನ್ಮಾನಿಸಲಾಯಿತು.

ಕಲ್ಲಡ್ಕ ಮಸೀದಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಚೆರೆಮೋನು ಮುಕ್ರಿ, 50ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಹಕೀಮ್‌ ಕಲ್ಲಡ್ಕರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಪ್ಯುಲರ್‌ ಫ್ರಂಟ್‌ ಬ್ಲಡ್‌ ಡೋನರ್ಸ್ ಫಾರಂ ಕಲ್ಲಡ್ಕ ಗೌರವಾಧ್ಯಕ್ಷರಾದ ಇಬ್ರಾಹೀಂ ಇದ್ದಿನಬ್ಬ ಕೆ.ಎಚ್‌, ಬಂಟ್ವಾಳದ ವಕೀಲರು ಮತ್ತು ನೋಟರಿಗಳಾದ ಹಬೀಬ್‌ ರಹ್ಮಾನ್‌, ಗೋಳ್ತಮಜಲು ಗ್ರಾಮ ಪಂಚಾಯತ್‌ ಸದಸ್ಯರಾದ ಹಾರಿಸ್‌ ಅಮರ್‌, ಇಕ್ಬಾಲ್‌ ಕೆ,ಸಿ ರೋಡ್‌, ಯೂಸುಫ್‌ ಹೈದರ್‌, ಸುಮಯ್ಯಾ ಸಿದ್ದೀಕ್‌, ಪಾಪ್ಯುಲರ್‌ ಫ್ರಂಟ್‌ ಬ್ಲಡ್‌ ಡೋನರ್ಸ್ ಫಾರಂ ಕಲ್ಲಡ್ಕ ಪ್ರಧಾನ ಕಾರ್ಯದರ್ಶಿ ಕೆ.ಕೆ ಸಯೀದ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವರದಿ
ಕೆ.ಕೆ.ಜಬ್ಬಾರ್ ಕಲ್ಲಡ್ಕ

error: Content is protected !! Not allowed copy content from janadhvani.com