janadhvani

Kannada Online News Paper

ಭಾರತದ ಸಂವಿಧಾನವನ್ನು ಬದಲಾಯಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ: ಕೆಸಿಎಫ್ ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್

ಭಾರತ ದೇಶದ 75ನೇ ಸ್ವಾತಂತ್ರ್ಯೋತ್ಸವವನ್ನು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಆಗಸ್ಟ್ 15ರಂದು ರಾತ್ರಿ ಭಾರತದ ಸಮಯ 10.00 ಗಂಟೆಗೆ ಸರಿಯಾಗಿ ಝೂಮ್ ಅಪ್ಲಿಕೇಶನ್ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಲೀ ಮುಸ್ಲಿಯಾರ್ ಬಹರೈನ್ ರವರ ಪುತ್ರ ದರ್ವೀಶ್ ಅಲೀ ಯವರು ಖಿರಾಅತ್ ಪಾರಾಯಣ ಮಾಡಿದರು. ಸಯ್ಯಿದ್ ಆಬಿದ್ ಆಟಕ್ಕೋಯಾ ಅಲ್’ಹೈದ್ರೋಸ್ ತಂಙಳ್ ರವರು ದುಆ ಮೂಲಕ ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಿದರು. ನಂತರ ಅಬ್ದುರ್ರಹಿಮಾನ್ ಕೋಡಿಯವರ ಮಗ ಮುಹಮ್ಮದ್ ರಮ್ಲೀಯವರು ಸುಮಧುರ ಕಂಠದಿಂದ ರಾಷ್ಟ್ರ ಗೀತೆ ಹಾಡಿದರು.

ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಖಮರುದ್ದೀನ್ ಗೂಡಿನಬಳಿಯವರು ಸ್ವಾಗತ ಕೋರಿದ ಸಭೆಯ ಅಧ್ಯಕ್ಷರಾದ ಡಾ| ಶೇಖ್ ಬಾವ ಮಂಗಳೂರು ರವರು ಅಧ್ಯಕ್ಷೀಯ ಮಾತುಗಳೊಂದಿಗೆ ಅಧಿಕೃತವಾಗಿ ಉದ್ಘಾಟನೆ ಮಾಡಿದರು.

ನಂತರ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಕರ್ನಾಟಕದ ವಿಧಾನಸಭಾ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರು ಮುಖ್ಯ ಪ್ರಭಾಷಣ ಮಾಡಿದರು. ಕೆಸಿಎಫ್ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿರುವುದು ನನ್ನ ಪಾಲಿಗೆ ಬಹುದೊಡ್ಡ ಗೌರವವಾಗಿ ಕಾಣುತ್ತಿದ್ದೇನೆ. ಹೊರದೇಶಗಳಿಗೆ ದುಡಿಯಲು ಹೋದ ತಾವು ನಡೆಸುವ ಈ ಕಾರ್ಯಕ್ರಮದಿಂದ ನಿಮ್ಮ ದೇಶಪ್ರೇಮ ಎಷ್ಟಿದೆ ಎಂದು ತಿಳಿಯಬಹುದಾಗಿದೆ.

1947ರಲ್ಲಿ ಬ್ರಿಟೀಷರಿಂದ ಸ್ವಾತಂತ್ರ್ಯಗೊಂಡ ಭಾರತಕ್ಕೆ 75 ವರ್ಷಗಳಾಗಿದೆ. ಒಬ್ಬ ಮನುಷ್ಯನಿಗೆ 75 ವರ್ಷ ಕಳಿದರೆ ಅವರಿಗೆ ಮುಪ್ಪು ಬಂದಾಗಿರುತ್ತದೆ ಆದರೆ ಭಾರತವೂ ಯುವತ್ವದಲ್ಲಿದೆ. ಭವ್ಯವಾದ ಭಾರತ ದೇಶಕ್ಕೆ ಬಹಳ ಅದ್ಭುತವಾದ ಸಂವಿಧಾನವಿದೆ. ಅದನ್ನು ಇಲ್ಲವಾಗಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಅಂತಹ ಶಕ್ತಿ ಏನಾದರೂ ಕೆಲಸ ಆರಂಭಿಸಿದರೆ ಅದನ್ನು ನಾವೆಲ್ಲರೂ ಒಟ್ಟಾಗಿ ಎದುರಿಸಬೇಕಾಗಿದೆ ಎಂದು ರಮೇಶ್ ಕುಮಾರ್ ರವರು ಮುಖ್ಯ ಭಾಷಣದಲ್ಲಿ ಹೇಳಿದರು. ಅವರ ಭಾಷಣದ ನಂತರ ಕಾರ್ಯಕ್ರಮದಲ್ಲಿ ಭಾಗಿಯಾದವರಿಗಿದ್ದ ಸಂಶಯಗಳನ್ನು‌ ಕೇಳಿ ಅದನ್ನು ನಿವಾರಣೆಯೂ ಮಾಡಿದರು.

ಅವರ ಭಾಷಣದ ನಂತರ ರಮೇಶ್ ಕುಮಾರ್ ರವರ ಸಾನಿಧ್ಯದಲ್ಲಿ ಅಂತರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ಇಲಾಖೆಯ ಕಾರ್ಯದರ್ಶಿ ಹಮೀದ್ ಬಜ್ಪೆಯವರು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರ” ಎಂಬ ಪುಸ್ತಕ ಹಾಗೂ esharalive.com ಎಂಬ ನ್ಯೂಸ್ ಪೋರ್ಟಲನ್ನು ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕೆ ಎಂ ಅಬೂಬಕ್ಕರ್ ಮೋಟುಗೋಳಿಯವರು ಕಾರ್ಯಕ್ರಮಕ್ಕೆ ಶುಭಹಾರೈಸಿದ ನಂತರ ಅಂತರಾಷ್ಟ್ರೀಯ ಸಮಿತಿ ಅಡ್ಮಿನ್ ಇಲಾಖೆಯ ಕಾರ್ಯದರ್ಶಿ ಇಕ್ಬಾಲ್ ಬರಕ ಒಮಾನ್ ರವರು ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com