ಕರ್ನಾಟಕ ಮುಸ್ಲಿಂ ಜಮಾಅತ್ ಅಧೀನದಲ್ಲಿ “ನಿರ್ಮಲ ಮನಸ್ಸು, ನೈರ್ಮಲ್ಯ ಪರಿಸರ” ಎಂಬ ಧ್ಯೇಯದೊಂದಿಗೆ ಜುಲೈ 1ರಿಂದ 15 ತನಕ ರಾಜ್ಯಾದ್ಯಂತ ನಡೆಯಲಿರುವ ಸಹಾಯ್ ಸ್ವಚ್ಚತಾ ಅಭಿಯಾನಕ್ಕೆ ಅಧಿಕೃತ ಚಾಲನೆ ದೊರೆತಿದೆ.
ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಯ ಪರಿಸರ ಶುಚಿಗೊಳಿಸಲು ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಚಾಲನೆ ನೀಡಿದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ, ಸಹಾಯ್ ತುರ್ತು ಸೇವಾ ಸನ್ನದ್ಧ ತಂಡದ ಕಾರ್ಯಾಚರಣೆಯನ್ನು ವಿವರಿಸಿದರು. ಸಹಾಯ್ ತಂಡದ ಕಾರ್ಯಕರ್ತರ ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸೇವಾ ಮನೋಭಾವದಿಂದಲೇ ಸಹಾಯ್ ಜನ ಮನಸ್ಸಿನಲ್ಲಿ ಸ್ಥಾನ ಹಿಡಿದಿದೆ. ಇದಕ್ಕೆ ಆರ್ಥಿಕ ಬೆನ್ನೆಲುಬಾಗಿರುವ ಕೆಸಿಎಫ್ ನ ನಾಯಕರು, ಕಾರ್ಯಕರ್ತರಿಗೆ ಕೃತಜ್ಞತೆ ಹೇಳಿದರು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಮಾತನಾಡಿ, ಜುಲೈ ಒಂದರಿಂದ ಹದಿನೈದರ ತನಕ ನಡುವೆ ತನಕ ನಡೆಯುವ ಸಹಾಯ್ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ. ಶೇಕ್ ಬಾವ ಅಬೂದಾಬಿ ಮಾತನಾಡಿ, ಸಹಾಯ್ ಕಾರ್ಯಕರ್ತರು ರಾತ್ರಿ ಹಗಲೆನ್ನದೆ ಸೇವೆ ಮಾಡುತ್ತಿದ್ದು, ಅವರ ಸೇವಾ ಮನೋಭಾವವನ್ನು ಮೆಚ್ಚಲೇ ಬೇಕು. ಎಲ್ಲಾ ರೀತಿಯ ಆರ್ಥಿಕ ಸಹಾಯವನ್ನು ಕೆಸಿಎಫ್ ಮಾಡಲಿದೆ ಎಂದರು.
ವೆನ್ಲಾಕ್ RMO ಡಾಕ್ಟರ್ ಜೂಲಿಯನ್ ಸಲ್ಡಾನಾ ಮಾತನಾಡಿ, ಡಾಕ್ಟರ್ಸ್ ದಿನದಂದು ನಾವಿರುವ ಆಸ್ಪತ್ರೆಯ ಪರಿಸರ ಶುಚಿತ್ವಗೊಳಿಸಿದ್ದು ನಮಗೆ ಸಂತೋಷ ನೀಡಿದೆ. ನಮ್ಮ ಪರಿಸರ ಶುಚಿಗೊಳಿಸಿದ್ದು ಈ ಡಾಕ್ಟರ್ಸ್ ದಿನದಂದು ನಮಗೆ ನೀಡುವ ದೊಡ್ಡ ಉಡುಗೊರೆ ಎಂದರು.
ಈ ಕಾರ್ಯಕ್ರಮದಲ್ಲಿ ವೆನ್ಲಾಕ್ DMO ಡಾಕ್ಟರ್ ಸದಾಶಿವ ಶಾಂಬೋಗ್, ಎಸ್.ಎಂ ತಂಙಳ್ ಬೆಳ್ತಂಗಡಿ, ಡಿ.ಪಿ. ಯೂಸುಫ್ ಸಖಾಫಿ ಬೈತಾರ್, ಇಸ್ಮಾಈಲ್ ಮಾಸ್ಟರ್ ಮೊಂಟೆಪದವು, ಜಮಾಲುದ್ದೀನ್ ವಿಟ್ಲ, ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಮುಸ್ತಫಾ ನಈಮಿ ಹಾವೇರಿ, ಅಬ್ದುಲ್ ಹಮೀದ್ ಬಜ್ಪೆ, ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಅಶ್ರಫ್ ಕಿನಾರ ಮುಂತಾದ ನಾಯಕರು ಉಪಸ್ಥಿತರಿದ್ದರು.
ಸಹಾಯ್ ದ.ಕ.ಜಿಲ್ಲಾ ಸಹಾಯ್ ಕೋಡಿನೇಟರ್ ಸಿರಾಜುದ್ದೀನ್ ಸಖಾಫಿ ಕನ್ಯಾನ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.