janadhvani

Kannada Online News Paper

ಟೆಲ್ಅವಿವ್,ಜೂನ್.14: ಬರೋಬ್ಬರಿ 12 ವರ್ಷಗಳ ಕಾಲ ಇಸ್ರೇಲ್ ಪ್ರಧಾನಮಂತ್ರಿಯಾಗಿ ಆಡಳಿತ ನಡೆಸಿದ್ದ ಬೆಂಜಮಿನ್ ನೆತನ್ಯಾಹು ಯುಗ ಕೊನೆಗೊಂಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರನ್ನು ಪದಚ್ಯುತಗೊಳಿಸಲಾಗಿದ್ದು, ನೂತನ ಪ್ರಧಾನಮಂತ್ರಿಯಾಗಿ ನಫ್ಟಾಲಿ ಬೆನೆಟ್ ಆಯ್ಕೆಯಾಗಿದ್ದಾರೆ. ಇಸ್ರೇಲ್ ಪ್ರಧಾನಿಯಾಗಿ ಇಂದು ಬೆನೆಟ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇಸ್ರೇಲ್ ರಾಜಕೀಯ ಪಕ್ಷಗಳ ಮೈತ್ರಿಕೂಟ ನಿನ್ನೆ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸಿವೆ. ಇಸ್ರೇಲ್ನಲ್ಲಿ ಇದುವರೆಗೂ ಆಡಳಿತ ನಡೆಸಿದವರಲ್ಲಿ ಅತಿ ಸುದೀರ್ಘ ಕಾಲ ಪ್ರಧಾನಮಂತ್ರಿಯಾಗಿದ್ದ ಬೆಂಜಮಿನ್ ನೆತನ್ಯಾಹು 12 ವರ್ಷಗಳ ಬಳಿಕ ಪ್ರಧಾನಿ ಪಟ್ಟದಿಂದ ಕೆಳಗಿಳಿದಿದ್ದಾರೆ. ನಿನ್ನೆ ಬೆಂಜಮಿನ್ ನೆತನ್ಯಾಹು ಬೆಂಬಲಿಗರ ಗದ್ದಲದ ನಡುವೆ 120 ಸದಸ್ಯ ಬಲವಿರುವ ಇಸ್ರೇಲ್ ಸಂಸತ್ ಬೆಂಜಮಿನ್ ನೆತನ್ಯಾಹು ಅವರ ಪದಚ್ಯುತಿಗೆ ಅನುಮೋದನೆ ನೀಡಿತು. ಇಂದು ಬಲ ಪಂಥೀಯ ಜೆವಿಷ್ ನ್ಯಾಷನಲಿಸ್ಟ್ ಮುಖಂಡರಾಗಿರುವ ನಫ್ಟಾಲಿ ಬೆನೆಟ್ ಇಸ್ರೇಲ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಯಾರು ಈ ನಫ್ಟಾಲಿ ಬೆನೆಟ್?:

ಈ ಹಿಂದೆ ಇಸ್ರೇಲ್ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ನಫ್ಟಾಲಿ ಬೆನೆಟ್ ಬಲಪಂಥೀಯ ಪಕ್ಷವಾದ ಯಾಮಿನಾ ಪಕ್ಷದ ಮುಖಂಡರಾಗಿದ್ದಾರೆ. ಟೆಕ್ ಮಿಲಿಯನೇರ್ ಕೂಡ ಆಗಿದ್ದ ಬೆನೆಟ್ ಅವರಿಗೆ 49 ವರ್ಷ. 8 ವಿಭಿನ್ನ ಸಿದ್ಧಾಂತಗಳಿರುವ ಪಕ್ಷಗಳ ಬೆಂಬಲದೊಂದಿಗೆ ಬೆನೆಟ್ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದಾರೆ. ಒಪ್ಪಂದದ ಪ್ರಕಾರ ಇನ್ನು 2 ವರ್ಷ ನಫ್ಟಾಲಿ ಬೆನೆಟ್ ಇಸ್ರೇಲ್ನ ಪ್ರಧಾನಿಯಾಗಿರಲಿದ್ದಾರೆ. ಬಳಿಕ ಯೆಶ್ ಅತಿಡ್ ಪಕ್ಷಯ ಯೇರ್ ಲ್ಯಾಪಿಡ್ ಇಸ್ರೇಲ್ನ ಪ್ರಧಾನಿಯಾಗಿ ಅಧಿಕಾರ ನಡೆಸಲಿದ್ದಾರೆ.

ಇಸ್ರೇಲ್ನ ಮಾಧ್ಯಮಗಳಿಂದ ಅಲ್ಟ್ರಾ ನ್ಯಾಷನಲಿಸ್ಟ್ ಎಂದೇ ಕರೆಸಿಕೊಳ್ಳುವ ನಫ್ಟಾಲಿ ಬೆನೆಟ್, ನೆತನ್ಯಾಹು ಅವರಿಗೆ ಹೋಲಿಸಿದರೆ ನಾನು ಹೆಚ್ಚು ಬಲಪಂಥೀಯ ಎಂಬುದು ಸತ್ಯ. ಆದರೆ, ನಾನು ಯಾರೊಂದಿಗೂ ದ್ವೇಷ ರಾಜಕಾರಣ ಮಾಡುವುದಿಲ್ಲ. ನನ್ನ ಸಿದ್ಧಾಂತಗಳು ರಾಜಕೀಯ ಮತ್ತು ಅಧಿಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ನೆತನ್ಯಾಹು ಸರ್ಕಾರದಲ್ಲಿ 2006ರಿಂದ 2008ರ ಅವಧಿಯಲ್ಲಿ ಹಿರಿಯ ಸಲಹೆಗಾರನಾಗಿದ್ದ ಬೆನೆಟ್ ಬಳಿಕ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷದಿಂದ ಹೊರಬಂದಿದ್ದರು. ಆಗ ಬೆನೆಟ್ ಇಸ್ರೇಲ್ನ ಬಿಲಿಯನೇರ್ ಆಗಿದ್ದರು.

ನಂತರ ನಫ್ಟಾಲಿ ಬೆನೆಟ್ ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಂಡು ಬಲಪಂಥೀಯ ರಾಜಕೀಯ ನಾಯಕನಾಗಿ ಗುರುತಿಸಿಕೊಂಡರು. 2013ರಲ್ಲಿ ಸಂಸತ್ ಅನ್ನು ಕೂಡ ಪ್ರವೇಶಿಸಿದರು. ಇದೀಗ ಇಸ್ರೇಲ್ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

2009ರಿಂದ ಇಸ್ರೇಲ್ನ ಪ್ರಧಾನಿಯಾಗಿದ್ದ ಬೆಂಜಮಿನ್ ನೆತನ್ಯಾಹು ಅವರು ಇನ್ನು ಇಸ್ರೇಲ್ನ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗಿದೆ. ಇಸ್ರೇಲ್ ಸಂಸತ್ನ 120 ಸದಸ್ಯ ಬಲದ ಪೈಕಿ ನೆತನ್ಯಾಹು ಪರ 59 ಮತಗಳು ಚಲಾವಣೆಯಾದವು. ಹೀಗಾಗಿ, ಅವರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ನೆತನ್ಯಾಹು ಇಸ್ರೇಲ್ನಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಪ್ರಧಾನಿಯಾಗಿದ್ದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೈತ್ರಿಕೂಟ ಒಪ್ಪಂದದ ಪ್ರಕಾರ ಬೆನೆಟ್ ಅವರ ಅಧಿಕಾರವು 2023ಕ್ಕೆ ಕೊನೆಯಾಗಲಿದೆ. ಬಳಿಕ ಯೇರ್ ಲ್ಯಾಪಿಡ್ ಪ್ರಧಾನಿಯಾಗಲಿದ್ದಾರೆ. ಬೆನೆಟ್ ಅವರ ಅಧಿಕಾರಾವಧಿಯಲ್ಲಿ ಲ್ಯಾಪಿಡ್ ಇಸ್ರೇಲ್ನ ವಿದೇಶಾಂಗ ಸಚಿವರಾಗಿರಲಿದ್ದಾರೆ. ಇಸ್ರೇಲ್ನ ಬಿಲಿಯನೇರ್ ಆಗಿರುವ ಬೆನೆಟ್ ನೇತೃತ್ವದಲ್ಲಿ 2 ವರ್ಷಗಳ ಕಾಲ ಇಸ್ರೇಲ್ ಮುಂದೆ ಸಾಗಲಿದೆ.

ಮತ್ತೆ ಇಸ್ರೇಲ್ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಬಹಳ ಆಸೆ ಇಟ್ಟುಕೊಂಡಿದ್ದ ಬೆಂಜಮಿನ್ ನೆತನ್ಯಾಹು ಅವರಿಗೆ ಈ ಬೆಳವಣಿಗೆಯಿಂದ ಭಾರೀ ನಿರಾಸೆಯಾಗಿದೆ. ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ನಫ್ಟಾಲಿ ಬೆನೆಟ್ ಅವರ ಸಂಪುಟದಲ್ಲಿ 27 ಸಚಿವರಿದ್ದು, ಅವರಲ್ಲಿ 9 ಮಂದಿ ಮಹಿಳೆಯರಾಗಿರುವುದು ವಿಶೇಷ.

error: Content is protected !! Not allowed copy content from janadhvani.com