janadhvani

Kannada Online News Paper

ಜೂ 21ರಿಂದ ದೇಶದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ- ಪ್ರಧಾನಿ

ನವದೆಹಲಿ,ಜೂ.7: ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಕುರಿತು ಗೊಂದಲವನ್ನು ಬಗೆಹರಿಸಿರುವ ಪ್ರಧಾನಿ ನರೇಂದ್ರ ಮೋದಿ ಜೂ 21ರಿಂದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ.

ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಸಕ್ತ ಶತಮಾನದ ಮಹಾಮಾರಿ ಕೋವಿಡ್-19 ವಿರುದ್ಧ ಹೋರಾಟಕ್ಕೆ ಲಸಿಕೀಕರಣವೇ ಮಹಾಮದ್ದು, ದೇಶಾದ್ಯಂತ ಶೇ. 100ರಷ್ಟು ಲಸಿಕೆ ಪೂರೈಕೆಗೆ ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರ ಲಸಿಕಾ ಕಂಪನಿಗಳಿಂದ ಲಸಿಕೆ ಖರೀದಿಸಿ ಎಲ್ಲಾ ರಾಜ್ಯಗಳಿಗೂ ಹಂಚಲಿದೆ. ಜೊತೆಗೆ, ಜೂ 21ರಿಂದ ಲಸಿಕೆ ನೀಡುವ ನಿಟ್ಟಿನಲ್ಲಿ ಶೀಘ್ರವೇ ಪ್ರತ್ಯೇಕ ಮಾರ್ಗಸೂಚಿ ಹೊರಬೀಳಲಿದೆ. ದೇಶಾದ್ಯಂತ ಉಚಿತ ಲಸಿಕೆ ನೀಡಲಾಗುವುದು.

ಸರ್ಕಾರಕ್ಕೆ ಹೊರೆಯಾಗಬಾರದು ಎಂದು ಭಾವಿಸುವ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದು. ಖಾಸಗಿ ಆಸ್ಪತ್ರೆಗೆ ಶೇಕಡ 25ರಷ್ಟು ಲಸಿಕೆ ಖರೀದಿಸಲು ಅವಕಾಶ ನೀಡಲಾಗುವುದು. ಇನ್ನು ಖಾಸಗಿ ಆಸ್ಪತ್ರೆಯವರು ಲಸಿಕೆ ಪಡೆಯುವವರಿಂದ 150 ರೂ. ಮಾತ್ರ ಪಡೆಯಬೇಕು ಎಂದರು.

ದೀಪಾವಳಿವರೆಗೆ ಉಚಿತ ಪಡಿತರ:
ಕಳೆದ ಏಪ್ರಿಲ್ನಲ್ಲಿ ಘೋಷಣೆಯಾದ ಲಾಕ್ ಡೌನ್ ಅವಧಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ, ಬಡಜನರಿಗೆ ಉಚಿತ ಪಡಿತರ ವಿತರಿಸುವ ಪ್ರಧಾನ ಮಂತ್ರಿ ಗರೀಬ್ ಅನ್ನ ಯೋಜನೆಯನ್ನು ದೀಪಾವಳಿವರೆಗೆ ಅಂದರೆ, ನವೆಂಬರ್ ತಿಂಗಳವರೆಗೆ ವಿಸ್ತರಿಸಲಾಗುವುದು. ಈ ಯೋಜನೆಯಡಿ ಬಡಜನರಿಗೆ ಪ್ರತಿ ತಿಂಗಳು ಉಚಿತ ಪಡಿತರ ದೊರೆಯಲಿದೆ ಎಂದರು. ಕಳೆದ ವರ್ಷ ಏಪ್ರಿಲ್, ಮೇ ತಿಂಗಳಿಗಾಗಿ ಆರಂಭಿಸಲಾಗಿದ್ದ ಈ ಯೋಜನೆಯನ್ನು ನಂತರ ವಿಸ್ತರಿಸಲಾಗಿತ್ತು. ಮಹಾಮಾರಿಯ ಸಮಯದಲ್ಲಿ ಸರ್ಕಾರ ಬಡವರ ಜೊತೆಗಿದೆ.ಯಾವುದೇ ಬಡ ಸಹೋದರರು ಹಸಿವಿನಿಂದ ಮಲಗಬಾರದು ಎಂಬುದು ಇದರ ಉದ್ದೇಶ ಎಂದು ಹೇಳಿದರು.

ಮಕ್ಕಳಿಗೂ ಲಸಿಕೆ ತಯಾರಿ:
ಕೋವಿಡ್-19 ಮೂರನೇ ಅಲೆಯಲ್ಲಿ ಮಕ್ಕಳಿಗೆ ಹಾನಿಯಾಗಲಿದೆ ಎಂಬ ತಜ್ಞರ ಹೇಳಿಕೆಯಿಂದ ಜನರು ಆತಂಕಪಡುವ ಅಗತ್ಯವಿಲ್ಲ. ಅದಕ್ಕಾಗಿಯೇ ಮಕ್ಕಳಿಗಾಗಿ ಲಸಿಕೆ ತಯಾರಿಸಲಾಗುತ್ತಿದ್ದು, ಪ್ರಯೋಗದ ಹಂತದಲ್ಲಿವೆ. ಒಂದು ನೇಸಲ್ ಲಸಿಕೆ ಕುರಿತು ಸಂಶೋಧನೆ ನಡೆಯುತ್ತಿದೆ. ಇದು ಮೂಗಿನಲ್ಲಿ ಸ್ಪ್ರೇ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇದರಲ್ಲಿ ಸಫಲತೆ ದೊರೆತರೆ ಅದು ಲಸಿಕಾ ಅಭಿಯಾನಕ್ಕೆ ವೇಗ ನೀಡಲಿದೆ ಎಂದರು.ಇಷ್ಟು ಕಡಿಮೆ ಸಮಯದಲ್ಲಿ ಲಸಿಕೆ ತಯಾರಿಸುವುದು ಮಾನವತೆಗೆ ಒಂದು ದೊಡ್ಡ ಕೊಡುಗೆಯಾಗಿದೆ.ಅದಕ್ಕೆ ಅದರ ಮಿತಿ ಕೂಡ ಇದೆ.

ಲಸಿಕೆ ತಯಾರಿಸಿದ ನಂತರ ಕೂಡ ದೇಶದ ಅತ್ಯಂತ ಕಡಿಮೆ ದೇಶಗಳಲ್ಲಿ ಲಸಿಕೀಕರಣ ಆರಂಭವಾಗಿದೆ. ಡಬ್ಲ್ಯುಎಚ್ಒ ಈ ಸಂಬಂಧ ಮಾರ್ಗಸೂಚಿ ಕೂಡ ನೀಡಿದೆ. ಲಸಿಕೆಯ ಒಂದು ಡೋಸ್ ಕೂಡ ಎಷ್ಟು ಮಹತ್ವ ಎಂಬುದನ್ನು ನಾವು ಅರಿತಿದ್ದೇವೆ. ಪ್ರತಿ ಡೋಸ್ ನೊಂದಿಗೆ ಒಂದು ಜೀವ ಉಳಿಯಬಹುದು ಎಂದರು. ಇನ್ನು ಜನರಲ್ಲಿ ಗೊಂದಲ ತಪ್ಪಿಸುವ ಸಲುವಾಗಿ ರಾಜ್ಯಗಳಿಗೆ ಒಂದು ವಾರ ಮುಂಚೆಯೇ ಯಾವಾಗ ಎಷ್ಟು ಡೋಸ್ ದೊರೆಯಲಿದೆ ಎಂಬ ವಿವರ ನೀಡಲಾಗುತ್ತಿದೆ ಎಂದು ಹೇಳಿದರು.

error: Content is protected !! Not allowed copy content from janadhvani.com