janadhvani

Kannada Online News Paper

ಹತ್ತು ದಿನದಲ್ಲಿ 5 ಲಕ್ಷ ರೂಪಾಯಿ ಬಿಲ್: ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಸುಲಿಗೆ ಕತೆ

ಕೊರೋನ ಮೊದಲ ಅಲೆಯ ಸಂದರ್ಭ “ಖಾಸಗಿ ಆಸ್ಪತ್ರೆಗಳು ದುಬಾರಿ ಬಿಲ್ ವಿಧಿಸಿ ಸೋಂಕಿತರನ್ನು ಸುಲಿಗೆ ಮಾಡುತ್ತಿವೆ” ಎಂದು ಪ್ರತಿ ದಿನ ದೂರುಗಳು ಬರುತ್ತಿದ್ದವು. ಕೊನೆಗೆ ಸರಕಾರ ಚಿಕಿತ್ಸೆಯ ದರಪಟ್ಟಿ ಪ್ರಕಟಿಸಿದರೂ ಸುಲಿಗೆ ತಪ್ಪಲಿಲ್ಲ. ಆದರೆ ಈ ಬಾರಿ ಅಂತಹ ದೂರು ಸಾರ್ವಜನಿಕವಾಗಿ ದೊಡ್ಡ ರೀತಿಯಲ್ಲಿ ಕೇಳಿ ಬರುತ್ತಿಲ್ಲ. ಅದಕ್ಕೆ ಕಾರಣ, ಈ ಬಾರಿ ಎರಡನೆ ಅಲೆ ವ್ಯಾಪಕವಾಗಿ ಬೀಸಿರುವುದರಿಂದ ಆಸ್ಪತ್ರೆಗಳಲ್ಲಿ ಬೆಡ್ ದೊರಕಿಸಿಕೊಳ್ಳುವುದೇ ದೊಡ್ಡ ಸಾಧನೆ ಎಂಬ ಮೂಡ್ ನಿರ್ಮಾಣ ವಾಗಿರುವುದರಿಂದ ಜನರೂ ಬಿಲ್ ಬಗ್ಗೆ ತುಟಿ ಬಿಚ್ಚದೆ ಖಾಸಗಿ ಆಸ್ಪತ್ರೆಗಳ ಖಜಾನೆ ತುಂಬುತ್ತಿದ್ದಾರೆ. ಇದು ಯಾವ ಮಟ್ಟಿಗಿನ ದಂಧೆಗೆ ಅವಕಾಶ ಮಾಡಿಕೊಟ್ಟಿದೆ ಎಂಬುದುಕ್ಕೆ ಕೆಳಗಿನ ಸುದ್ದಿ ನೋಡಿ

ಸೋಮವಾರ ಪೇಟೆಯ ಅಹಮದ್ ಎಂಬ 65 ರ ಹರೆಯದ ಹಿರಿಯ ವ್ಯಕ್ತಿಗೆ ಕೋವಿಡ್ ತಗುಲಿದೆ. ಒಂದಿಷ್ಟು ದಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖವಾಗದ ಹಿನ್ನಲೆಯಲ್ಲಿ ಮಂಗಳೂರಿನ “ಅಥೆನಾ ಆಸ್ಪತ್ರೆ”ಗೆ ದಾಖಲಿಸಿದ್ದಾರೆ. “ಅಥೆನಾ ಆಸ್ಪತ್ರೆ” ಜಿಲ್ಲಾಡಳಿತ ಘೋಷಿಸಿದ ಕೊರೋನ ಆಸ್ಪತ್ರೆಗಳಲ್ಲಿ ಒಂದಾಗಿದ್ದರೂ, “ಆಯುಷ್ಮಾನ್ ಸಹಿತ ಯಾವುದೇ ಸರಕಾರಿ ರಿಯಾಯತಿಗಳು ದೊರಕುವುದಿಲ್ಲ, ಪೂರ್ತಿ ಬಿಲ್ ರೋಗಿಯ ಕಡೆಯವರೇ ಪಾವತಿಸಬೇಕು” ಎಂಬ ಶರತ್ತು ವಿಧಿಸಿ” ರೋಗಿಯನ್ನು‌ ಐಸಿಯುನ ಆಕ್ಸಿಜನ್ ಬೆಡ್ ಗೆ ಅಡ್ಮಿಷನ್ ಮಾಡಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆ ನೇಮಿಸಿದ್ದ “ಆರೋಗ್ಯ ಮಿತ್ರ” ಸಿಬ್ಬಂದಿ ರೋಗಿಯ ಕಡೆಯವರಿಗೆ ಮಾಹಿತಿ ಒದಗಿಸದಂತೆ ಪಳಗಿಸಿಟ್ಟುಕೊಂಡಿದ್ದಾರೆ.

ಹೀಗೆ ಐಸಿಯವಿನ ಆಕ್ಸಿಜನ್ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಹತ್ತು ದಿನಗಳಲ್ಲಿ ಸರಿ ಸುಮಾರು ಒಂದೂವರೆ ಲಕ್ಷ ರೂಪಾಯಿಗಳ ಔಷಧಿಯನ್ನು ರೋಗಿಯ ಕಡೆಯವರಿಂದ ಆಸ್ಪತ್ರೆಯ ಸಿಬ್ಬಂದಿಗಳು ತಮ್ಮದೇ ಮೆಡಿಕಲ್ ನಿಂದ ತರಿಸಿಕೊಂಡಿದ್ದಾರೆ. ಒಂದೂವರೆ ಲಕ್ಷ ರೂಪಾಯಿಗಳ ಔಷಧಿ, ಐಸಿಯು ಚಿಕಿತ್ಸೆಯಿಂದಲೂ ಅಹಮ್ಮದರ ಆರೋಗ್ಯ ಸುಧಾರಣೆಯಾಗುವುದರ ಬದಲು ಮತ್ತಷ್ಟು ಹದಗೆಟ್ಟಿದೆ. ಇದರಿಂದ ಬದುಕುವ ಆಸೆ ಕೈಬಿಟ್ಟ ವೃದ್ದರಾದ ಅಹಮದರು ತನ್ನನ್ನು ಮನೆಗೆ ಕರೆದೊಯ್ಯುವಂತೆ ಹಠ ತೊಟ್ಟಿದ್ದಾರೆ. ಕೊನೆಗೆ ವೈದ್ಯರ ಸಲಹೆ ಪಡೆದು ಡಿಸ್ಚಾರ್ಜ್ ಮಾಡುವ ನಿರ್ಧಾರಕ್ಕೆ ರೋಗಿಯ ಕುಟುಂಬಸ್ಥರು ಬಂದಿದ್ದಾರೆ.

ಹೀಗೆ ಡಿಸ್ಚಾರ್ಜ್ ನಿರ್ಧಾರಕ್ಕೆ ಬಂದಾಗ ಅಥೆನಾ ಆಸ್ಪತ್ರೆಯವರು ಔಷಧಿಯ ಒಂದೂವರೆ ಲಕ್ಷ ರೂಪಾಯಿ ಹೊರತು ಪಡಿಸಿ ಬರೋಬ್ವರಿ ನಾಲ್ಕು ಲಕ್ಷ ರೂಪಾಯಿ ಬಿಲ್ ನೀಡಿದ್ದಾರೆ ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಮಂಗಳೂರಿನ ಪರಿಚಿತರ ಬಳಿ ನೋವು ತೋಡಿಕೊಂಡಿದ್ದಾರೆ. (ನಿಮಗೆ ತಿಳಿದಿರಲಿ. ಸರಕಾರ ನಿಗದಿ ಪಡಿಸಿದ ಪ್ರಕಾರ ಐಸಿಯು ಅಕ್ಸಿಜನ್ ಬೆಡ್ ದರ ಒಂದು ದಿನಕ್ಕೆ 15 ಸಾವಿರ ರೂಪಾಯಿ. ಇದರಲ್ಲಿ ಆಕ್ಸಿಜನ್, ವೈದ್ಯರ ವೆಚ್ಚವೂ ಒಳಗೊಂಡಿದೆ, ಅ ಪ್ರಕಾರ ಹೆಚ್ಚೆಂದರೆ ಒಂದೂವರೆ ಲಕ್ಷ ಬಿಲ್ ಮಾಡಬಹುದು) ವಕೀಲರಾದ ಪರಿಚಿತರು ಈ ಕುರಿತು ನೋಡಲ್ ಅಧಿಕಾರಿಗೆ ದೂರು ನೀಡಿದ್ದಾರೆ. ಆಗ ಒಂದಿಷ್ಟು ಚಿಲ್ಲರೆ ರೂಪಾಯಿ ರಿಯಾಯತಿಯ ಆಫರ್ ಆಸ್ಪತ್ರೆಯ ಆಡಳಿತ ನೀಡಿದೆ. ಅದನ್ನು ಒಪ್ಪದ ವಕೀಲರು ಕೊನೆಗೆ ಈ “ಸುಲಿಗೆಯ ಕತೆ” ಯನ್ನು ಡಿವೈಎಫ್ಐ ಸಂಘಟನೆಯ ಗಮನಕ್ಕೆ ತಂದಿದ್ದಾರೆ.

ಅದರಂತೆ ಸಂಘಟನೆಯ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ನಡೆಯುತ್ತಿರುವ ಸುಲಿಗೆಯ ಕುರಿತು ವಿವರವಾದ ಮಾಹಿತಿ ನೀಡಲಾಯಿತು.‌ ಕೋವಿಡ್, ಆಯುಷ್ಮಾನ್ ಕುರಿತು ತನಿಖೆಯ ಜವಾಬ್ದಾರಿ ಹೊಂದಿರುವ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ರತ್ಮಾಕರ್ ಅವರಲ್ಲಿಯೂ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಲಾಯಿತು.‌ “ಆಯುಷ್ಮಾನ್ ಗೆ ರೋಗಿಯ ಕಡೆಯವರು ಅಡ್ಮಿಷನ್ ಸಂದರ್ಭ ಮನವಿ ಮಾಡದೇ ಇದ್ದ ಕಾರಣ ಈ ಕುರಿತು ಸಹಾಯ ಕಷ್ಟ, ದುಬಾರಿ ಬಿಲ್ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ” ರತ್ನಾಕರ್ ತಿಳಿಸಿದರು. ಜಿಲ್ಲಾಧಿಕಾರಿಗಳೂ ರತ್ಮಾಕರ್ ಅವರಲ್ಲಿ ಸರಿಯಾದ ಕ್ರಮಕ್ಕೆ ಸೂಚಿಸಿದರು.

ಕೊನೆಗೆ ರತ್ನಾಕರ್ ನೇತೃತ್ವದ ಅಧಿಕಾರಿಗಳ ತಂಡ ಅಥೆನಾ ಆಸ್ಪತ್ರೆಗೆ ತೆರಳಿ ವಿವರವಾದ ಮಾತುಕತೆ ನಡೆಸಿ ನಾಲ್ಕು ಲಕ್ಷ ಮೊತ್ತದ ಬಿಲ್ ಅನ್ನು ಒಂದು ಲಕ್ಷ ಇಪ್ಪತ್ತು ಸಾವಿರಕ್ಕೆ ಇಳಿಸಿದರು. ನಿಟ್ಟುಸಿರು ಬಿಟ್ಟ ರೋಗಿಯ ಕುಟುಂಬಸ್ಥರು ಒಂದು ಲಕ್ಷ ಇಪ್ಪತ್ತು ಸಾವಿರ ಬಿಲ್ ಪಾವತಿಸಿ ರೋಗಿಯನ್ನು ಡಿಸ್ಚಾರ್ಜ್ ಮಾಡಿಸಿದರು. ಎಲ್ಲಾ ಪ್ರಕ್ರಿಯೆ ಮುಗಿಸಿ ಸೋಂಕಿತ ವೃದ್ದರನ್ನು ಆಂಬುಲೆನ್ಸ್ ಗೆ ಸಾಗಿಸುವಾಗ ಆಗಲೇ ಆರೋಗ್ಯ ಕ್ಷೀಣಗೊಂಡಿದ್ದ ವೃದ್ದ ಆಸ್ಪತ್ರೆಯ ವರಾಂಡದಲ್ಲೆ ಮೃತಪಟ್ಟರು.

ಈಗ ಇರುವ ಪ್ರಧಾನ ಪ್ರಶ್ನೆ. ಕೋವಿಡ್ ಆಸ್ಪತ್ರ್ರೆಯಾಗಿ ಆಯ್ಕೆಗೊಂಡಿದ್ದ ಅಥೆನಾ ಸರಕಾರದಿಂದ ಸಿಗುವ ಸೌಲಭ್ಯ ರಿಯಾಯತಿಗಳನ್ನು ಮರೆಮಾಚಿದ್ದು ಯಾಕೆ ? *ಆಸ್ಪತ್ರೆಯಲ್ಲೇ ಇದ್ದು ಎಲ್ಲವನ್ಜೂ ನಿಭಾಯಿಸಬೇಕಾದ ಆರೋಗ್ಯ ಮಿತ್ರ, ನೋಡಲ್ ಅಧಿಕಾರಿ ಆಸ್ಪತ್ರೆ ಪರವಾಗಿ ಬಾಯಿ ಮುಚ್ಚಿ ಕೂರಲು ಕಾರಣ ಏನು ?

ಐಸಿಯು ಆಕ್ಸಿಜನ್ ಬೆಡ್ ನಲ್ಲಿದ್ದ ಕೋವಿಡ್ ರೋಗಿಗೆ ಒಂಬತ್ತು ದಿನಕ್ಕೆ ಒಂದೂವರೆ ಲಕ್ಷ ರೂಪಾಯಿ ಔಷಧಿ ಯಾತಕ್ಕಾಗಿ ಬಳಕೆಯಾಗುತ್ತದೆ ? ಇದರಲ್ಲಿ ಏನಾದರು ಅವ್ಯವಹಾರ ನಡೆಯುತ್ತಿದೆಯೆ ?

ದಿನಕ್ಕೆ ಹದಿನೈದು ಸಾವಿರ ರೂಪಾಯಿಯಂತೆ (ಸರಕಾರವೇ ನಿಗದಿ ಪಡಿಸಿದ) ,ಹೆಚ್ಚೆಂದರೆ ಒಂದೂವರೆ ಲಕ್ಷ ರೂಪಾಯಿ ಆಗಬೇಕಾದ ಚಿಕಿತ್ಸಾ ವೆಚ್ಚ ನಾಲ್ಕು ಲಕ್ಷ ಚಿಲ್ಲರೆ ಆಗುವುದು ಹೇಗೆ ? ಇದು ದಂಧೆಯಲ್ಲವೆ ?

ಕೊನೆಗೆ ಎರಡು ಮಕ್ಕಾಲು ಲಕ್ಷ ರೂಪಾಯಿ ಗಳ ರಿಯಾಯತಿ ರೋಗಿಗೆ ದೊರಕಿದರೂ, ಅದನ್ನು ಅಯುಷ್ಮಾನ್ ಯೋಜನೆ ಮೂಲಕ ಜಿಲ್ಲಾಡಳಿತ ಅಥೆನಾ ಆಸ್ಪತ್ರೆಗೆ ಪಾವತಿ ಮಾಡಲಿದೆ. ಇದು ಸಾರ್ವಜನಿಕರ ತೆರಿಗೆಯ ಹಣದ ಸುಲಿಗೆಯಲ್ಲವೆ ? ಈ ರೀತಿ ದಂಧೆಯನ್ನು ನಿಲ್ಲಿಸಲು ಜಿಲ್ಲಾಡಳಿತಕ್ಕೆ ಯಾರು ಅಡ್ಡಿ ?

ಇದು ಒಂದು ಪ್ರಕರಣ ಅಲ್ಲ. ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಕುಟುಂಬಸ್ಥರ ರಕ್ತ ಹೀರಲಾಗಿದೆ. ಕೆಲವು ಕುಟುಂಬಗಳು‌ ಬರ್ಬಾದ್ ಅಗಿ ಹೋಗಿವೆ. ಕಳೆದ ವರ್ಷ ಪ್ರಥಮ ಅಲೆಯ ಸಂದರ್ಭದಲ್ಲೂ ಇದೆ ರೀತಿಯ ದಂಧೆ ನಡೆದಿತ್ತು. ಆಗ ಡಿವೈಎಫ್ಐ ದೊಡ್ಡ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿತ್ತು. ಈ ಬಾರಿ ಆಸ್ಪತ್ರೆಯಲ್ಲಿ ಬೆಡ್ ಗಳು “ಹೌಸ್ ಫುಲ್” ಎಂಬ ಕೃತಕ ಸೃಷ್ಟಿಯ ಹಿಂದೆ ಸುಲಿಗೆಯ ಪ್ರಮಾಣ ಮತ್ತಷ್ಟು ಏರಿದೆ.‌ ಕೋವಿಡ್ ಸಂತ್ರಸ್ತರ ಧ್ವನಿ ಉಡುಗಿ ಹೋಗಿದೆ. ಇಂತಹ ದಂಧೆಯ ವಿರುದ್ದ ರಾಜಕೀಯ ಪಕ್ಷಗಳು, ಸಂಘಟನೆಗಳೂ ಧ್ವನಿ‌ ಎತ್ತಲು ಹಿಂಜರಿಯುತ್ತವೆ. ಸರಕಾರದ, ಜಿಲ್ಲಾಡಳಿತದ ಮಾರ್ಗ ಸೂಚಿಗಳು ಖಾಸಗಿ ಆಸ್ಪತ್ರೆಯ ಧಣಿಗಳ ಚೇಂಬರ್ ನ ಕಸದ ಬುಟ್ಟಿ ಸೇರಿವೆ.

ಮುನೀರ್ ಕಾಟಿಪಳ್ಳ

error: Content is protected !! Not allowed copy content from janadhvani.com