janadhvani

Kannada Online News Paper

ನೇಪಾಳ ಸಹಿತ ಎಲ್ಲಾ ಹಾದಿಗಳು ಬಂದ್: ಭಾರತೀಯ ವಲಸಿಗರ ಸೌದಿ ಪ್ರಯಾಣ ಅನಿಶ್ಚಿತತೆಯಲ್ಲಿ

ರಿಯಾದ್: ನೇಪಾಳ ಮಾರ್ಗವಾಗಿ ಭಾರತೀಯ ಪ್ರಯಾಣಿಕರನ್ನು ಸಾಗಿಸುವುದನ್ನು ನಿಷೇಧಿಸಿದ ನಂತರ ವಲಸಿಗರಿಗೆ ಸೌದಿ ಅರೇಬಿಯಾಕ್ಕೆ ಮರಳುವ ಎಲ್ಲಾ ಹಾದಿಯು ಮುಚ್ಚಿದಂತಾಗಿದೆ. ಸದ್ಯಕ್ಕೆ ಭಾರತದಿಂದ ನೇರ ವಿಮಾನಗಳು ಮೇ 17 ರಿಂದ ಪ್ರಾರಂಭವಾಗುವ ಯಾವುದೇ ನಿರೀಕ್ಷೆಯಿಲ್ಲ.

ಈ ಹಿಂದೆ ಸೌದಿ ಅರೇಬಿಯಾಕ್ಕೆ ಮರಳಲು ಸಾಧ್ಯವಾಗದೆ ನೂರಾರು ಜನರು ಯುಎಇ ಮತ್ತು ಒಮಾನ್‌ನಲ್ಲಿ ಸಿಕ್ಕಿಹಾಕಿಕೊಂಡವರು, ಇದೀಗ ನೇಪಾಳದಲ್ಲಿ ಸಿಲುಕಿಕೊಂಡವರ ಪೈಕಿ ಹಲವರಿದ್ದಾರೆ. ಭಾರತದಿಂದ ಸೌದಿ ಅರೇಬಿಯಾಕ್ಕೆ ನೇರ ಪ್ರಯಾಣ ನಿಷೇಧದಿಂದಾಗಿ ವಲಸಿಗರು ನೇಪಾಳ, ಬಹ್ರೇನ್ ಮತ್ತು ಮಾಲ್ಡೀವ್ಸ್ ಅನ್ನು ತಮ್ಮ ತಾಣಗಳಾಗಿ ಆಯ್ಕೆ ಮಾಡಿಕೊಂಡಿದ್ದರು. ಆದಾಗ್ಯೂ, ಮಾಲಿ ನಂತರ ನಿರ್ಬಂಧಗಳನ್ನು ವಿಧಿಸಿತು. ಮತ್ತು ಬಹ್ರೇನ್ ನಿರ್ಬಂಧಗಳನ್ನು ಕಠಿಣಗೊಳಿಸಿತು. ಇದರೊಂದಿಗೆ ಹೆಚ್ಚಿನ ಪ್ರಯಾಣಿಕರು ನೇಪಾಳವನ್ನು ಅವಲಂಬಿಸಿದ್ದರು.ವೀಸಾ ಮತ್ತು ಎನ್‌ಒಸಿ ಅಗತ್ಯವಿಲ್ಲ ಎಂಬ ಅಂಶವೂ ನೇಪಾಳದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಈಗ ನೇಪಾಳದಲ್ಲಿ ಸುಮಾರು ಹತ್ತು ಸಾವಿರ ಸೌದಿ ಪ್ರಯಾಣಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಲಕ್ಷ ರೂ ಪಾವತಿಸಿ ಸೌದಿಗೆ ಮರಳಲು ಮುಂದೆ ಬಂದವರಾಗಿದ್ದಾರೆ. ಯುಎಇ ಮತ್ತು ಒಮಾನ್‌ನಲ್ಲಿ ಭಾರತೀಯ ವಿಮಾನಗಳ ನಿಷೇಧದೊಂದಿಗೆ, ಈ ದೇಶಗಳಿಗೆ ತೆರಳುವ ವಲಸಿಗರು ನೇಪಾಳವನ್ನೇ ಅವಲಂಬಿಸಿದ್ದಾರೆ.

ಸದ್ಯದ ಭಾರತದ ಪರಿಸ್ಥಿತಿಯಲ್ಲಿ, ಭಾರತದಿಂದ ಸೌದಿ ಅರೇಬಿಯಾಕ್ಕೆ ನೇರ ವಿಮಾನಯಾನ ಪುನರಾರಂಭಗೊಳ್ಳುವ ಯಾವುದೇ ನಿರೀಕ್ಷೆಯಿಲ್ಲ. ಯುಎಇ ವಿಷಯದಲ್ಲಿ ಸೌದಿ ಅರೇಬಿಯಾ ಯಾವ ನಿಲುವು ತಾಳಲಿದೆ ಎಂದು ಕಾದು ನೋಡಬೇಕಾಗಿದೆ. ನಿರ್ಬಂಧ ತೆರವುಗೊಳಿಸಿದ್ದಲ್ಲಿ ವಲಸಿಗರು ಮತ್ತೆ ತಮ್ಮ ನೆಲೆಯಾಗಿ ದುಬೈಯನ್ನು ಅವಲಂಬಿಸಿ ಸೌದಿ ಅರೇಬಿಯಾಕ್ಕೆ ಮರಳಲು ಸಾಧ್ಯವಾಗಲಿದೆ.

ಏನೇ ಇರಲಿ, ಮುಂದಿನ ತಿಂಗಳ ಮೊದಲ ವಾರದಲ್ಲಿ ಯುಎಇಗೆ ಪ್ರಯಾಣ ನಿಷೇಧವನ್ನು ತೆಗೆದುಹಾಕುವುದಾಗಿ ಸೌದಿ ಅರೇಬಿಯಾ ಪ್ರಕಟಿಸಲಿದೆ ಎಂಬುದು ಶುಭ ನಿರೀಕ್ಷೆಯಾಗಿದೆ.

error: Content is protected !! Not allowed copy content from janadhvani.com