janadhvani

Kannada Online News Paper

ಅಕ್ಕಿ ಕೇಳಿದ್ದಕ್ಕೆ’ಸಾಯಿರಿ’ ಎಂದ ಆಹಾರ ಸಚಿವ ಉಮೇಶ್ ಕತ್ತಿ- ಸಿಎಂ ವಿಷಾಧ

ಬೆಂಗಳೂರು: ಆಹಾರ ಸಚಿವ ಉಮೇಶ್ ಕತ್ತಿ ನೀಡಿರುವ ಉಡಾಫೆ ಹಾಗೂ ಬೇಜವಾಬ್ದಾರಿ ಹೇಳಿಕೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

ರೈತನೊಬ್ಬ 5 ಕೆ.ಜೆ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವುದಕ್ಕೆ ನಾವು ಸಾಯಬೇಕೇ ಬದುಕಬೇಕೇ ಎಂದು ಕೇಳಿದ್ದಕ್ಕೆ ಆಹಾರ ಮತ್ತು ನಾಗರೀಕ ಖಾತೆ ಸಚಿವ ಉಮೇಶ್ ಕತ್ತಿ ಅವರು, ಸಾಯಿ ಎಂದು ಹೇಳಿರುವುದು ಒಬ್ಬ ಸಚಿವನಾಗಿ ಸರಿಯಲ್ಲ. ಆ ಭಾಗದಲ್ಲಿರುವ ಜನರಿಗೆ ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿಯನ್ನು ಕೊಡಲು ವ್ಯವಸ್ಥೆ ಮಾಡಲಾಗುವುದು. ಉಮೇಶ್ ಕತ್ತಿ ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಯಡಿಯೂರಪ್ಪ ತಿಳಿಸಿದ್ದಾರೆ.

ಕೊರೋನಾ ಸಂಕಷ್ಟದಲ್ಲೂ ರಾಜ್ಯ ಸರ್ಕಾರ ಪಡಿತರ ಅಕ್ಕಿ ಕಡಿತಗೊಳಿಸಿದನ್ನು ಸಚಿವರಿಗೆ ಕರೆ ಮಾಡಿ ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಸಾಯುವುದು ಒಳ್ಳೆಯದು ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿರುವುದು ವೈರಲ್ ಆಗಿದೆ. ಅಕ್ಕಿ ಕಡಿತಗೊಳಿಸಿದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ಉತ್ತರಿಸಿರುವ ಆಹಾರ ಸಚಿವ ಉಮೇಶ್ ಕತ್ತಿ, ಉತ್ತರ ಕರ್ನಾಟಕದಲ್ಲಿ ಅಕ್ಕಿ ಜತೆಗೆ ಜೋಳ ಕೊಡುತ್ತೇವೆ. ಲಾಕ್​ ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತದೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಉಮೇಶ್ ಕತ್ತಿ ಬೆಳಗಾವಿಯಲ್ಲಿ ಹೇಳಿದಾಗ ಲಾಕ್​ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯಬೇಕೇ? ಎಂದು ವ್ಯಕ್ತಿ ಸಚಿವರಿಗೆ ಪ್ರಶ್ನಿಸಿದ್ದು ಇದಕ್ಕೆ ಪ್ರತ್ಯುತ್ತರವಾಗಿ ಸಾಯುವುದು ಒಳ್ಳೆಯದು ಎಂದು ಉಡಾಫೆಯಿಂದ ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ಇನ್ನು ಈ ಬಗ್ಗೆ ಬೆಳಗಾವಿಯಲ್ಲಿ ಸ್ಪಷ್ಟನೆ ನೀಡಿರುವ ಆಹಾರ ಸಚಿವ ಉಮೇಶ್ ಕತ್ತಿ, ಯೋಜನೆ ಏನು ಇದೆಯೋ ಅದನ್ನೇ ಹೇಳಿದ್ದೇನೆ. ಕರೆ ಮಾಡಿದ ವ್ಯಕ್ತಿ ಸತ್ತೋಗೋದಾ ಎಂದು ಕೇಳಿದ. ಅದಕ್ಕೆ ನಾನು ಸತ್ತೋಗಿ ಎಂದು ಹೇಳಿದ್ದೇನೆ. ಅದಕ್ಕಿಂತ ಬೇರೆ ಇನ್ನೇನು ಹೇಳಲಿ. ಬೇಡ ಎಂದು ಹೇಳುವಷ್ಟು ದೊಡ್ಡ ಮನಸ್ಸು ನನಗಿಲ್ಲ. ರಾಜ್ಯದಲ್ಲಿ ಊಟ ಸಿಗದೆ ಯಾರೂ ಸಾಯಬಾರದು. ಮುಖ್ಯಮಂತ್ರಿಗಳು ನನಗೆ ಒಳ್ಳೆಯ ಖಾತೆ ಕೊಟ್ಟಿದ್ದಾರೆ ಎಂದು ಹೇಳಿದರು. ಇನ್ನು ಉಮೇಶ್ ಕತ್ತಿ ಅವರ ಬೇಜವಾಬ್ದಾರಿ ಹೇಳಿಕೆಗೆ ಎಲ್ಲೆಡೆಯಿಂದ ಜನರ ಆಕ್ರೋಶ ವ್ಯಕ್ತವಾಗಿದೆ.

error: Content is protected !! Not allowed copy content from janadhvani.com