janadhvani

Kannada Online News Paper

ಇಂದಿನಿಂದ ರಾಜ್ಯದಲ್ಲಿ ಲಾಕ್ಡೌನ್ ಮಾದರಿಯಲ್ಲಿ ಕಠಿಣ ನಿರ್ಬಂಧಗಳು ಜಾರಿ

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್‌ 27ರ ರಾತ್ರಿ 9 ಗಂಟೆಯಿಂದ ಆರಂಭಿಸಿ ಮೇ 12ರ ಬೆಳಿಗ್ಗೆ 6 ಗಂಟೆವರೆಗೆ ಕರ್ಫ್ಯೂ ಮಾದರಿಯಲ್ಲಿ ಕಠಿಣ ನಿರ್ಬಂಧಗಳು ಜಾರಿಯಲ್ಲಿರಲಿವೆ. ಇದರ ವಿವರಗಳನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ.

ಈ ಅವಧಿಯಲ್ಲಿ ಕನಿಷ್ಠ ಸೇವೆಗಳು ಮಾತ್ರ ಇರಲಿವೆ. ಪ್ರಯಾಣ ಸೇರಿ ಉಳಿದೆಲ್ಲಾ ಚಟುವಟಿಕೆಗಳಿಗೆ ಸರಕಾರ ನಿರ್ಬಂಧ ವಿಧಿಸಿದೆ. ಅವುಗಳ ವಿವರ ಹೀಗಿದೆ,

ಯಾವುದಕ್ಕೆಲ್ಲಾ ನಿರ್ಬಂಧ?

 • ಈಗಾಗಲೇ ನಿಗದಿಯಾಗಿರುವ ವಿಮಾನ, ರೈಲುಗಳು ಮಾತ್ರ ಓಡಾಡಲಿವೆ. ಇದಕ್ಕೆ ಟಿಕೆಟ್‌ನ್ನೇ ಪಾಸ್‌ ರೀತಿಯಲ್ಲಿ ಬಳಸಲು ಸೂಚಿಸಲಾಗಿದೆ.
 • ಮೆಟ್ರೋ, ಆಟೋ ರಿಕ್ಷಾ, ಕ್ಯಾಬ್‌, ಸಾರಿಗೆ ಬಸ್‌ಗಳು ಇರುವುದಿಲ್ಲ. ತುರ್ತು ಬಳಕೆಗೆ ಮಾತ್ರ ಕ್ಯಾಬ್‌ಗಳನ್ನು ಬಳಸಬಹುದು.
 • ಶಾಲೆ, ಕಾಲೇಜು ಯಾವುದೂ ಇಲ್ಲ. ಆನ್‌ಲೈನ್‌ ಶಿಕ್ಷಣ ಮಾತ್ರ ಮುಂದುವರಿಯಲಿದೆ. ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳನ್ನು ಕೊರೊನಾ ಸುರಕ್ಷತೆಯ ಕ್ರಮಗಳೊಂದಿಗೆ ನಡೆಸಬಹುದು.
 • ಹೋಟೆಲ್‌, ರೆಸ್ಟೋರೆಂಟ್‌, ಅತಿಥಿ ಗೃಹಗಳು ಇರುವುದಿಲ್ಲ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಸೇವೆಗೆ ಅಡುಗೆ ಕೋಣೆ ತೆರೆದಿರಬಹುದು. ಇದಲ್ಲದೆ, ಆರೋಗ್ಯ ಸಿಬ್ಬಂದಿ, ಪೊಲೀಸರು, ಸರಕಾರಿ ಅಧಿಕಾರಿಗಳು ಹಾಗೂ ರಾಜ್ಯದಲ್ಲಿ ಸಿಲುಕಿಕೊಂಡ ಪ್ರವಾಸಿಗಳು ಮಾತ್ರ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಬಹುದು.
 • ಸಿನಿಮಾ ಮಂದಿರ, ಜಿಮ್‌, ಸ್ಪಾ, ಶಾಪಿಂಗ್‌ ಮಾಲ್‌, ಯೋಗ ಕೇಂದ್ರ, ಕ್ರೀಡಾ ಚಟುವಟಿಕೆಗಳು, ಮನರಂಜನಾ ತಾಣಗಳು, ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳು, ಕ್ಲಬ್‌ಗಳು, ಬಾರ್, ಅಡಿಟೋರಿಯಂಗಳನ್ನು ತೆರೆಯುವಂತಿಲ್ಲ.
 • ಸ್ಟೇಡಿಯಂ ಮತ್ತು ಮೈದಾನದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಮತ್ತು ತರಬೇತಿಗೆ ತೆರೆಯಲು ಅವಕಾಶವಿದೆ. ಆದರೆ ವೀಕ್ಷಕರು ಇರುವಂತಿಲ್ಲ.
 • ಕೀಡಾಪಟುಗಳ ತರಬೇತಿ ಕಾರಣಕ್ಕೆ ಸ್ವಿಮ್ಮಿಂಗ್‌ ಫೆಡರೇಷನ್‌ ಅನುಮತಿ ನೀಡಿದ ಈಜುಕೊಳಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
 • ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲವೇ ಇಲ್ಲ.
 • ಎಲ್ಲಾ ಧಾರ್ಮಿಕ ಕ್ಷೇತ್ರಗಳು ಮುಚ್ಚರಲಿವೆ. ಪೂಜೆ ಸಲ್ಲಿಸಲು ಮಾತ್ರ ಅರ್ಚಕರಿಗೆ ಅವಕಾಶವಿದೆ.


ಸರಕಾರಿ ಕಚೇರಿಗಳೂ ಬಂದ್‌, ಕೆಲವು ಮಾತ್ರ ಓಪನ್‌

ಕಂಟೈನ್‌ಮೆಂಟ್‌ ಝೋನ್‌ನ ಹೊರಗಡೆ ಸರಕಾರಿ, ಸ್ವಾಯತ್ತ, ನಿಗಮಗಳ ಕೆಲವು ಕಚೇರಿಗಳು ಮಾತ್ರ ತೆರೆದಿರಲಿವೆ. ಉಳಿದವು ಮುಚ್ಚಿರಲಿವೆ. ತೆರೆದಿರುವ ಕಚೇರಿಗಳ ವಿವರಗಳು ಹೀಗಿದೆ,

 • ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕ, ಬಂಧೀಖಾನೆ, ಸಿವಿಲ್‌ ಡಿಫೆನ್ಸ್‌, ಅಗ್ನಿಶಾಮಕ ಮತ್ತು ತುರ್ತುಸೇವೆ, ವಿಕೋಪ ನಿರ್ವಹಣೆ, ಕಂದಾಯ, ಉಪನೋಂದಣಾಧಿಕಾರಿ ಮತ್ತು ಜೈಲುಗಳು ಮಾತ್ರ ತೆರೆದಿರಲಿವೆ.
 • ಅಗತ್ಯ ಸೇವೆಗಳನ್ನು ನೀಡುವ ನೀರು, ನೈರ್ಮಲ್ಯ, ವಿದ್ಯುತ್‌ಗೆ ಸಂಬಂಧಿಸಿದ ಕಚೇರಿಗಳು ತೆರೆದಿರಲಿವೆ.
 • ಬಿಬಿಎಂಪಿ, ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳು, ಡಿಸಿ ಕಚೇರಿ, ಕೆಳಹಂತದ ಕಚೇರಿಗಳು ತೆರೆದಿರಲಿವೆ.
 • ವಿಧಾನಸೌಧ, ವಿಕಾಸಸೌಧ, ಎಂಎಸ್‌ ಬಿಲ್ಡಿಂಗ್‌, ಡಿಪಿಎಆರ್‌ ಕಚೇರಿಗಳ ನಿರ್ವಹಣೆ ಸಂಬಂಧ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುತ್ತದೆ.
 • ಕೋರ್ಟ್‌ ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ಕಚೇರಿ ಕೆಲಸಗಳು ಹೈಕೋರ್ಟ್‌ ಹೊರಡಿಸಿದ ಮಾರ್ಗಸೂಚಿಯನ್ವಯ ಮುಂದುವರಿಯುತ್ತವೆ.
 • ಕೊರೊನಾ ಸಂಬಂಧಿ ಕೆಲಸಕ್ಕೆ ನಿಯೋಜನೆಗೊಂಡ ಕಚೇರಿಗಳು, ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
 • ಖಾಜಾನೆ ಕಚೇರಿಗಳು ತೆರೆದಿರಲಿವೆ.
 • ಕೊರೊನಾ ಸಂಬಂಧಿ ಕೆಲಸಕ್ಕೆ ಬಿಬಿಎಂಪಿ, ಡಿಸಿ ಕಚೇರಿ, ನಗರ ಸ್ಥಳೀಯ ಸಂಸ್ಥೆ ಕಚೇರಿಗಳಿಂದ ನಿಯೋಜಿಸಲ್ಪಟ್ಟ ಸ್ವಯಂ ಸೇವಕರು, ಎನ್‌ಜಿಒಗಳು ಕಾರ್ಯ ನಿರ್ವಹನಿಸಲಿವೆ.
 • ಅರಣ್ಯ ಇಲಾಖೆ ಘೋಷಿಸಿದ ಇಲಾಖೆ ಸಂಬಂಧಿ ಕೆಲಸಗಳು ಮುಂದುವರಿಯಲಿವೆ.

ಉಳಿದೆಲ್ಲಾ ಸರಕಾರಿ ಸಿಬ್ಬಂದಿಗೆ ವರ್ಕ್‌ ಫ್ರಂ ಹೋಮ್‌ ಮಾಡುವಂತೆ ಸೂಚಿಸಲಾಗಿದೆ. ಇನ್ನು ಕೇಂದ್ರ ಸರಕಾರದ ಈ ಕೆಳಗಿನ ಕಚೇರಿಗಳ ಕಾರ್ಯನಿರ್ವಹಣೆಗೂ ಅವಕಾಶ ನೀಡಲಾಗಿದೆ. ಅವುಗಳು ಹೀಗಿವೆ,

 • ಭದ್ರತೆ, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ, ಟೆಲಿಕಮ್ಯುನಿಕೇಷನ್‌, ಡಿಫೆನ್ಸ್‌ ಪಿಎಸ್‌ಯುಗಳ ಕಾರ್ಯಾಚರಣೆಗೆ ಅವಕಾಶವಿದೆ.
 • ಅಗತ್ಯ ಸೇವಗಳ ಅಡಿಯಲ್ಲಿ ಬರುವ ಕಚೇರಿಗಳ (ಟೆಲಿಕಾಂ ಹಾಗೂ ಇತರ) ಕಾರ್ಯನಿರ್ವಹಣೆಗೆ ಅವಕಾಶವಿದೆ.
 • ಖಜಾನೆ, ಆರ್ಥಿಕ ಸಲಹೆಗಾರರು, ಸಿಎಜಿ ಕಾರ್ಯಚರಣೆಗೆ ಅವಕಾಶವಿದೆ.
 • ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಹಾಗೂ ಪಿಎನ್‌ಜಿ ಗ್ಯಾಸ್‌ ಕೇಂದ್ರಗಳು, ವಿದ್ಯುತ್‌ ಉತ್ಪಾದನೆ ಮತ್ತ ಸರಬರಾಜು ಕೇಂದ್ರಗಳು, ವಿಕೋಪ ನಿರ್ವಹಣಾ ಕೇಂದ್ರಗಳು, ಅಂಚೆ ಕಚೇರಿ ಮತ್ತು ಮುನ್ನೆಚ್ಚರಿಕೆ ನೀಡುವ ಕೇಂದ್ರಗಳು ತೆರೆದಿರಲಿವೆ.
 • ರಾಷ್ಟ್ರೀಯ ಮಾಹಿತಿ ಕೇಂದ್ರದ ಕಾರ್ಯನಿರ್ವಹಣೆಗೂ ಅವಕಾಶವಿದೆ.
 • ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌, ಜಿಎಸ್‌ಟಿಎನ್‌, ಎಂಸಿಎ 21 ಕಚೇರಿಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿವೆ.
 • ಬ್ಯಾಂಕ್‌, ಆರ್‌ಬಿಐ, ಆರ್‌ಬಿಐ ನಿಯಂತ್ರಿತ ಹಣಕಾಸು ಮಾರುಕಟ್ಟೆಗಳು, ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಇರಲಿವೆ.
 • ರೈಲ್ವೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಾಚರಣೆಗಳಿಗೂ ಅವಕಾಶ ನೀಡಲಾಗಿದೆ/

ಆರೋಗ್ಯ ಸೇವೆಗಿಲ್ಲ ತೊಂದರೆ

 • ಆಯುಷ್‌, ಪಶು ಆರೋಗ್ಯ ಕೇಂದ್ರಗಳು, ಲ್ಯಾಬ್‌ಗಳು, ಕ್ಲಿನಿಕ್‌ಗಳು ಬ್ಲಡ್‌ ಬ್ಯಾಂಕ್‌ಗಳು, ಮೆಡಿಕಲ್‌ಗಳು ಸೇರಿದಂತೆ ಆರೋಗ್ಯ ಸೇವೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೂ ಮುಕ್ತ ಅವಕಾಶ ನೀಡಲಾಗಿದೆ.
 • ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಔಷಧ ಸೇರಿ ಎಲ್ಲಾ ಉತ್ಪಾದನಾ ಚಟುವಟಿಕೆಗಳು, ನಿರ್ಮಾಣ ಚಟುವಟಿಕೆಗಳು ಮುಂದುವರಿಯಲಿವೆ.


ಕೃಷಿ, ನರೇಗಾ, ಸರಕು ಸಾಗಾಟ, ಆಶ್ರಮಗಳಿಗಿಲ್ಲ ಅಡ್ಡಿ

 • ಅಂಗಡಿ, ಗೋದಾಮು ಸೇರಿ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗೆ ಅವಕಾಶವಿದೆ.
 • ಮಕ್ಕಳು, ವಿಕಲಾಂಗರು, ಬುದ್ದಿ ಮಾಂದ್ಯರು, ಹಿರಿಯರು, ವಿಧವೆಯರಿಗೆ ಆಶ್ರಯ ನೀಡಿರುವ ಅನಾಥಾಶ್ರಮ, ವೃದ್ಧಾಶ್ರಮ ಸೇರಿ ಆಶ್ರಮಗಳು, ಮೇಲ್ವಿಚಾರಣೆ ಕೇಂದ್ರಗಳು, ಆರೈಕೆ ಕೇಂದ್ರಗಳು ತೆರೆದಿರಲಿವೆ.
 • ಕೋವಿಡ್‌ ಸುರಕ್ಷತಾ ಕ್ರಮಗಳೊಂದಿಗೆ ನರೇಗಾ ಕೆಲಸಗಳೂ ಮುಂದುವರಿಯಲಿವೆ.
 • ಕಂಟೈನ್‌ಮೆಂಟ್‌ ಝೋನ್‌ ಹೊರಗಡೆ ಎಲ್ಲಾ ರೀತಿಯ ಸರಕು ಸಾಗಣೆಗೆ ಅನುಮತಿ ಇದೆ. ಖಾಲಿ ವಾಹನ ಓಡಾಟಕ್ಕೂ ಅವಕಾಶವಿದೆ. ಇದಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ.

ಜನರ ಓಡಾಟಕ್ಕೆ ಸಂಪೂರ್ಣ ನಿರ್ಬಂಧ

 • ಮಾರ್ಗಸೂಚಿಯಲ್ಲಿ ಅನುಮತಿ ನೀಡಿದ್ದನ್ನು ಹೊರತುಪಡಿಸಿ ಖಾಸಗಿ, ಸರಕಾರಿ ಬಸ್‌, ವಾಹನಗಳ ಓಡಾಟಕ್ಕೆ ಅನುಮತಿ ಇಲ್ಲ.
 • ಅಂತಾರಾಜ್ಯ ಮತ್ತು ರಾಜ್ಯದ ಒಳಗೆ, ಜಿಲ್ಲೆಯ ಒಳಗೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಜನರು ಮತ್ತು ವಾಹನಗಳ ಓಡಾಟಕ್ಕೆ ಅವಕಾಶವಿದೆ.
 • ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ನ್ನು ಪಾಸ್‌ ರೀತಿಯಲ್ಲಿ ಬಳಸಬೇಕು. ಇದಕ್ಕಾಗಿ ಕ್ಯಾಬ್‌, ರಿಕ್ಷಾ ಬಳಸಬಹುದು.
 • ಏರ್‌ಪೋರ್ಟ್‌ ಬಸ್‌, ಟಾಕ್ಸಿ ಇರಲಿದೆ. ಪ್ರಯಾಣಕ್ಕೆ ದಾಖಲೆಗಳು ಕಡ್ಡಾಯ
 • ಆಟೋ, ಕ್ಯಾಬ್‌ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬಹುದು.
 • ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿರುವ ಕಾರ್ಮಿಕರು ಓಡಾಟಕ್ಕೆ ಆಯಾ ಕಂಪನಿಯಿಂದ ನೀಡಲಾದ ಐಡಿ ಕಾರ್ಡ್‌ ಹೊಂದಿರಬೇಕು
 • ರೋಗಿಗಳು, ಅವರ ಸಂಬಂಧಿಕರ ಪ್ರಯಾಣಕ್ಕೆ ಅವಕಾಶವಿದೆ.
 • ಅನುಮತಿ ಇರುವ ಸರಕಾರಿ ಅಧಿಕಾರಿಗಳೂ ಪ್ರಯಾಣದ ವೇಳೆ ತಮ್ಮ ಗುರುತಿ ಚೀಟಿ ತೋರಿಸುವುದ ಕಡ್ಡಾಯ

ಏನೆಲ್ಲಾ ಇರಲಿದೆ

 • ನ್ಯಾಯಬೆಲೆ ಅಂಗಡಿಗಳು, ದಿನಸಿ, ತರಕಾರಿ ಮತ್ತು ಹಣ್ಣು, ಹಾಲು ಮತ್ತು ಬೇಕರಿ ಉತ್ಪನ್ನಗಳು, ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವಿನ ಅಂಗಡಿಗಳು, ಮದ್ಯದ ಅಂಗಡಿಗಳು ಬೆಳಿಗ್ಗೆ 6 ರಿಂದ 10ಗಂಟೆವರೆಗೆ ಮಾತ್ರ ತೆರೆದಿರಲಿವೆ. ಹೋಮ್‌ ಡೆಲಿವರಿಗೆ ಅವಕಾಶವಿದೆ.
 • ಇ-ಕಾಮರ್ಸ್‌ ಸೇರಿ, ಅಗತ್ಯ ಸರಕುಗಳ ಪೂರೈಕೆಗೆ ಸಂಬಂಧಿಸಿದ ಉತ್ಪಾದನೆ, ಗೋದಾಮುಗಳನ್ನು ತೆರೆಯಲು ಅಡ್ಡಿ ಇಲ್ಲ.
 • ಆಹಾರ ಸಂಸ್ಕರಣೆ ಹಾಗೂ ಇದಕ್ಕೆ ಸಂಬಂಧಿಸಿದ ಕೈಗಾರಿಕೆಗಳು, ಸಂಸ್ಥೆಗಳ ಕಾರ್ಯ ನಿರ್ವಹಣೆಗೆ ಅಡ್ಡಿ ಇಲ್ಲ.
 • ಬ್ಯಾಂಕ್‌, ಇನ್ಶೂರೆನ್ಸ್‌ ಕಂಪನಿ, ಎಟಿಎಂ ತೆರೆದಿರಲಿವೆ.
 • ಮುದ್ರಣ ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮಗಳಿಗೆ ಯಾವುದೇ ನಿರ್ಬಂಧ ಇಲ್ಲ.
 • ಟೆಲಿಕಾಂ, ಇಂಟರ್‌ನೆಟ್‌, ಕೇಬಲ್‌ ಸೇವೆ ನೀಡುವ ಸಿಬ್ಬಂದಿ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ವಾಹನಗಳು, ಸಿಬ್ಬಂದಿ ಓಡಾಟಕ್ಕೂ ಅವಕಾಶವಿದೆ.
 • ಅಗತ್ಯ ಇರುವಷ್ಟೇ ಸಿಬ್ಬಂದಿ ಐಟಿ ಕಂಪನಿಗಳಲ್ಲಿ ಕಚೇರಿಗೆ ಬರಬೇಕು. ಉಳಿದವರೆಲ್ಲರೂ ಮನೆಯಿಂದಲೇ ಕೆಲಸ ಮುಂದುವರಿಸಬೇಕು.
 • ಇ-ಕಾಮರ್ಸ್‌ ಮೂಲಕ ಎಲ್ಲಾ ರೀತಿಯ ಡೆಲಿವರಿಗೂ ಮುಕ್ತ ಅವಕಾಶವಿದೆ.
 • ವಿದ್ಯುತ್‌ ಉತ್ಪಾದನೆ ಮತ್ತು ಸರಬರಾಜಿಗೆ ಸಂಬಂಧಿಸಿದ ಚಟುವಟಿಕೆಗಳಿಗೂ ಅವಕಾಶವಿದೆ.
 • ‘ಸೆಬಿ’ಯಿಂದ ಅನುಮತಿ ಪಡೆದಿರುವ ಕ್ಯಾಪಿಟಲ್‌ ಮತ್ತು ಡೆಬ್ಟ್‌ ಮಾರ್ಕೆಟ್‌ಗಳಿಗೆ ನಿಷೇಧ ಅನ್ವಯಿಸುವುದಿಲ್ಲ.
 • ಕೋಲ್ಡ್‌ ಸ್ಟೋರೇಜ್‌ ಮತ್ತು ವೇರ್‌ಹೌಸ್‌ಗಳಿಗೆ ಅನುಮತಿ ಇದೆ.
 • ಖಾಸಗಿ ಭದ್ರತಾ ಸೇವೆಗಳಿಗೆ ಅನುಮತಿ ಇದೆ.
 • ವಿಮಾನಯಾನಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಅವಕಾಶವಿದೆ.

ನಿರ್ಮಾಣ, ಕೈಗಾರಿಕೆಗೆ ಅಡ್ಡಿಯಿಲ್ಲ

 • ಗಾರ್ಮೆಂಟ್ಸ್‌ ಹೊರತುಪಡಿಸಿ ಉಳಿದ ಕೈಗಾರಿಕೆಗಳು ಮತ್ತು ಉತ್ಪಾದನಾ ಚಟುವಟಿಕೆಗಳಿಗೆ ಅವಕಾಶವಿದೆ. ಕೊರೊನಾ ನಿಯಮಗಳ ಪಾಲನೆ ಮಾತ್ರ ಕಡ್ಡಾಯ. ಸಿಬ್ಬಂದಿಗಳು ಓಡಾಟಕ್ಕೆ ಐಡಿ ಕಾರ್ಡ್‌ ಬಳಸಬೇಕು.
 • ಎಲ್ಲಾ ನಿರ್ಮಾಣ, ರಿಪೇರಿ ಚಟುವಟಿಕೆಗಳಿಗೆ ಅವಕಾಶವಿದೆ. ಆದರೆ ವಾರಾಂತ್ಯದಲ್ಲಿ ಮಾತ್ರ ಕಾರ್ಮಿಕರು ಅಲ್ಲೇ ಇದ್ದಲ್ಲಿ ಮಾತ್ರ ನಿರ್ಮಾಣ ಚಟುವಟಿಕೆ ಮುಂದುವರಿಸಬಹುದು. ವಾರಾಂತ್ಯದಲ್ಲಿ ಪ್ರಯಾಣಕ್ಕೆ ಅವಕಾಶವಿಲ್ಲ.
 • ಮುಂಗಾರು ಪೂರ್ವ ತಯಾರಿಯ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ.

ಮದುವೆಗೆ 50 ಜನ, ಅಂತ್ಯಸಂಸ್ಕಾರಕ್ಕೆ 5 ಜನ

 • ಇನ್ನು ಮದುವೆಯಲ್ಲಿ 50 ಜನ, ಅಂತ್ಯಸಂಸ್ಕಾರದಲ್ಲಿ ಕೇವಲ 5 ಜನ ಭಾಗವಹಿಸಲು ಮಾತ್ರ ಅವಕಾಶವಿದೆ. ಅಲ್ಲೂ ಕೊರೊನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲೇಬೇಕು.

ಮಹಾನಗರ ಪಾಲಿಕೆಯಲ್ಲಿ ಮಾಸ್ಕ್ ಧರಿಸದಿದ್ದಲ್ಲಿ 250 ರೂ. ಉಳಿದ ಕಡೆಗಳಲ್ಲಿ 100 ರೂ. ದಂಡ

error: Content is protected !! Not allowed copy content from janadhvani.com