janadhvani

Kannada Online News Paper

1-9ನೇ ತರಗತಿಯ ಮಕ್ಕಳಿಗೆ ಪರೀಕ್ಷೆ-ಶಿಕ್ಷಣ ಇಲಾಖೆ ಸಭೆ

ಬೆಂಗಳೂರು,ಏ.04: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹಾವಳಿ ಹೆಚ್ಚಾಗಿರುವುದರಿಂದ ಶಾಲಾ ತರಗತಿಗಳ ಬಗ್ಗೆ ಸರ್ಕಾರ ಪ್ರತಿನಿತ್ಯ ತಜ್ಞರೊಂದಿಗೆ ಚರ್ಚಿಸಿ ಹೊಸಾ ನಿರ್ಧಾರಗಳನ್ನು ಪ್ರಕಟಿಸುತ್ತಲೇ ಇದೆ. ಈಗಾಗಲೇ ಬೆಂಗಳೂರು ನಗರ ಜಿಲ್ಲೆಯಲ್ಲಿ 6ರಿಂದ 9ನೇ ತರಗತಿಗಳ ಭೌತಿಕ ತರಗತಿಗಳನ್ನು ನಿಲ್ಲಿಸಲಾಗಿದೆ.

ವಿದ್ಯಾರ್ಥಿಗಳು ಮತ್ತೆ ಆನ್ಲೈನ್ ತರಗತಿಗಳಿಗೆ ತೆರಳಿದ್ದಾರೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಎಂದಿನಂತೆ ತರಗತಿಗಳು ಮುಂದುವರೆದಿದೆ. ಆದರೆ ಕೇವಲ ತರಗತಿಗಳು ಮಾತ್ರವಲ್ಲದೇ ಪರೀಕ್ಷೆಗಳ ಬಗ್ಗೆಯೂ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಸಾಕಷ್ಟು ಗೊಂದಲಗಳಿವೆ.

1ರಿಂದ 9ನೇ ತರಗತಿಯ ಮಕ್ಕಳಿಗೆ ಪರೀಕ್ಷೆ ನಡೆಸಲಾಗುತ್ತದೆಯೋ ಇಲ್ಲವೋ ಎನ್ನುವ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ. ಈಗಾಗಲೇ ಕೆಲ ರಾಜ್ಯಗಳಲ್ಲಿ ಕೊರೋನಾ ಹಾವಳಿ ಹೆಚ್ಚಾಗಿರುವುದರಿಂದ ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವ ನಿರ್ಧಾರ ಪ್ರಕಟಾಗಿದೆ. ಆದ್ರೆ ಕರ್ನಾಟಕದಲ್ಲಿ ಈ ಕುರಿತು ಸರ್ಕಾರ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಈ ಹಿನ್ನೆಲೆಯಲ್ಲಿ ಶಾಲಾಮಕ್ಕಳ ಪರೀಕ್ಷೆಗಳ ಕುರಿತು ಸೋಮವಾರ, ಏಪ್ರಿಲ್ 5ರಂದು ಶಿಕ್ಷಣ ಇಲಾಖೆ ಸಭೆ ಕರೆದಿದೆ. 1ರಿಂದ 9ನೇ ತರಗತಿಯ ಮಕ್ಕಳಿಗೆ ಪರೀಕ್ಷೆ ನಡೆಸಬೇಕಾ ಬೇಡವಾ ಮತ್ತು ಈ ಎರಡೂ ವಿಚಾರಗಳ ಸಾಧಕ ಬಾಧಕಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಶಿಕ್ಷಣ ಸಚಿವ ಸುರೇಶ್ ಕುಮಾರ್, ಇಲಾಖೆ ಆಯುಕ್ತ ಅನ್ಬು ಕುಮಾರ್ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದರೊಂದಿಗೆ ಶಿಕ್ಷಣ ತಜ್ಞರು ಹಾಗೂ ಖಾಸಗಿ ಶಾಲೆಗಳ ಒಕ್ಕೂಟ ಪ್ರತಿನಿಧಿಗಳನ್ನು ಕೂಡಾ ಸಭೆಗೆ ಆಹ್ವಾನಿಸಲಾಗಿದೆ. ಆದರೆ ಈ ಸಭೆಗೆ ಪೋಷಕರು ಮತ್ತು ಅವರ ಸಂಘಟನೆಗಳಿಗೆ ಯಾವುದೇ ಆಹ್ವಾನ ನೀಡಲಾಗಿಲ್ಲ.

1 ರಿಂದ 9 ನೇ ತರಗತಿ ಮೌಲ್ಯಾಂಕನ ಪರೀಕ್ಷೆ ನಡೆಸಲು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಶಿಕ್ಷಣ ತಜ್ಞ ಪಿ.ವಿ.ನಿರಂಜನಾರಾಧ್ಯ, ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಲೇಪಾಕ್ಷಿ ಹಾಗೂ ಕ್ಯಾಮ್ಸ್ ಕಾರ್ಯದರ್ಶಿ ಡಿ ಶಶಿಕುಮಾರ್ಗೆ ಆಹ್ವಾನ ನೀಡಲಾಗಿದೆ. ಸೋಮವಾರ ಬೆಳಗ್ಗೆ 10.30ಕ್ಕೆ ಸಮಗ್ರ ಶಿಕ್ಷಣ ಇಲಾಖೆ ಸಭಾಂಗಣದಲ್ಲಿ ಈ ಸಭೆ ನಡೆಯಲಿದೆ. ಈ ಸಭೆಯ ನಂತರ ವಿದ್ಯಾರ್ಥಿಗಳು ಮತ್ತು ಪೋಷಕರ ಅನೇಕ ಗೊಂದಲಗಳಿಗೆ ತೆರೆ ಬೀಳುವ ನಿರೀಕ್ಷೆ ಇದೆ.

error: Content is protected !! Not allowed copy content from janadhvani.com