ರಾಯಚೂರು: ‘ಮಸ್ಕಿ ಉಪಚುನಾವಣೆ ಏಕೆ ಬಂತು ಎಂಬುದು ಜನರಿಗೆ ಗೊತ್ತಿದೆ. ಪ್ರತಾಪಗೌಡ ಪಾಟೀಲ್ ಅವರು ಈಗ ಬಿಜೆಪಿ ಅಭ್ಯರ್ಥಿಯಾಗಿದ್ದು ಅವರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ, ಲಂಚಕ್ಕೆ ಬಲಿಯಾಗಿ ಸುಮಾರು ₹20ರಿಂದ 30 ಕೋಟಿಗೆ ಮಾರಾಟವಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಕೊಟ್ಟು ಬಿಜೆಪಿ ಸೇರಿದ್ದಾರೆ’ ಎಂದು ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು. ಪಟ್ಟಣದ ತೇರ ಬೀದಿಯಲ್ಲಿ ಕಾಂಗ್ರೆಸ್ ನಿಂದ ಆಯೋಜಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
‘ಎರಡು ಸಲ ಶಾಸಕ ಮಾಡಿದ ಪಕ್ಷಕ್ಕೆ ದ್ರೋಹ ಬಗೆದು ಪ್ರತಾಪಗೌಡ ಪಾಟೀಲ್ ಅವರು ಬಿಜೆಪಿಗೆ ಹೋಗಿದ್ದಾರೆ.ಅವರನ್ನು ಸೋಲಿಸ ಬೇಕಾಗಿದ್ದು ಮಸ್ಕಿ ಕ್ಷೇತ್ರದ ಜನರ ಕೆಲಸ. ಬಸನಗೌಡ ತುರುವಿಹಾಳ ಅವರನ್ನು ವಿಧಾನಸಭೆ ಕಳಿಸಲು ಮಸ್ಕಿ ವಿಧಾನಸಭಾ ಕ್ಷೇತ್ರ ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ’ ಎಂದರು.’ಗ್ರಾಮ ಗ್ರಾಮಕ್ಕೆ ಬಂದು ಮತದಾರರನ್ನು ಕೇಳುತ್ತೇನೆ. ಬಸನಗೌಡ ಪರ ಮತಯಾಚಿಸುತ್ತೇನೆ’ ಎಂದು ಹೇಳಿದರು.
ಎಲ್ಲಾ ಜಾತಿಗಳ ಬಡವರಿಗೆ 7 ಕೆಜಿ ಉಚಿತವಾಗಿ ಅಕ್ಕಿ ಕೊಡುವ ಯೋಜನೆ ಮಾಡಲಾಗಿತ್ತು. ಆದರೆ ಯಡಿಯೂರಪ್ಪ ಬಡವರಿಗೆ ಅಕ್ಕಿ ಕೊಡುವುದನ್ನು 4 ಕೆಜಿ ಕಡಿಮೆ ಮಾಡಿದ್ದಾರೆ. ಜನರ ಹಣ ಜನರಿಗೆ ಕೊಡಲು ಇವರಪ್ಪನ ಮನೆ ಗಂಟೇನು ಹೋಗ್ತಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆಜಿ ಅಕ್ಕಿ ಉಚಿತವಾಗಿ ಕೊಡಲಾಗುವುದು’ ಎಂದು ತಿಳಿಸಿದರು.
‘ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ರೂಪಾಯಿ ಸಾಲ ಮನ್ನಾ ಮಾಡಲಿಲ್ಲ. 2018ನೇ ಸಾಲಿನ ಪ್ರಣಾಳಿಕೆಯಲ್ಲಿ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಸಾಲ ಮನ್ನಾ ಮಾಡಿಲ್ಲ. ಇಂಥವರಿಗೆ ನೀವು ಓಟು ಕೊಡ್ತೀರಾ’ ಎಂದು ಜನರನ್ನು ಪ್ರಶ್ನಿಸಿದರು.
‘ಅಗತ್ಯವಸ್ತುಗಳ ಬೆಲೆ, ಇಂಧನ ಬೆಲೆ ಹಾಗೂ ತರಕಾರಿಗಳ ಬೆಲೆಗಳು ಗಗನಕ್ಕೇರಿವೆ. ಇಂತಹ ಸಂದರ್ಭದಲ್ಲಿ ಬಡವರು ಬದುಕಲು ಸಾಧ್ಯವಿಲ್ಲ. ಕಾಂಗ್ರೆಸ್ ಎಲ್ಲ ಜನರ ಪಕ್ಷವಾಗಿದ್ದು, ಬಸನಗೌಡ ಅವರನ್ನು ಆಯ್ಕೆಗೊಳಿಸಿ’ ಎಂದು ಮನವಿ ಮಾಡಿದರು.
‘ಪ್ರತಾಪ್ ಗೌಡರಂತಹ ಪಕ್ಷ ದ್ರೋಹಿಗಳಿಗೆ ಕರ್ನಾಟಕ ರಾಜಕೀಯದಲ್ಲಿ ಬೆಳೆಯಲು ಬಿಡಬಾರದು. ತಕ್ಕ ಪಾಠ ಕಲಿಸಬೇಕು. ಸ್ವಾಭಿಮಾನ ಇಲ್ಲದ ದುಡ್ಡಿಗೋಸ್ಕರ ಮಾಡಿಕೊಳ್ಳುವಂತಹ ರಾಜಕಾರಣಿಗಳಿಗೆ ಅವಕಾಶ ನೀಡಬಾರದು’ ಎಂದರು.