janadhvani

Kannada Online News Paper

ತೈಲ ದರ ಏರಿಕೆಯ ಬಿಸಿ: ಲೋಕಸಭಾ,ರಾಜ್ಯಸಭಾ ಕಲಾಪಗಳಲ್ಲಿ ಗದ್ದಲ

ಹೊಸ ದಿಲ್ಲಿ: ಲೋಕಸಭಾ ಹಾಗೂ ರಾಜ್ಯಸಭಾ ಕಲಾಪಗಳೆರಡಕ್ಕೂ ತೈಲ ದರ ಏರಿಕೆಯ ಬಿಸಿ ತಟ್ಟಿದೆ. ಮಂಗಳವಾರ ಉಭಯ ಸದನಗಳು ಹಲವು ಬಾರಿ ಮುಂದೂಡಿಕೆಯಾಗಿವೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಸದನದಲ್ಲಿ ಭಾರೀ ಗದ್ದಲ, ಕೋಲಾಹಲ ಎಬ್ಬಿಸಿದ್ದು, ಸದಸ್ಯರು ಶಾಂತಿ ಕಾಪಾಡಬೇಕೆಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ.

ಲೋಕಸಭೆ ಕಲಾಪ ಮಂಗಳವಾರ ಆರಂಭವಾದ ಕೂಡಲೇ ಮುಂದೂಡಬೇಕಾಯ್ತು. ವಿಪಕ್ಷ ಸದಸ್ಯರು ಪ್ರಶ್ನೋತ್ತರ ಕಲಾಪಕ್ಕೂ ಅಡ್ಡಿಪಡಿಸಿದರು. ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಇಂಧನ ದರ ಏರಿಕೆ ಹಿಂಪಡೆಯುವಂತೆ ಒತ್ತಾಯಿಸಿದರು.

ಡಿಎಂಕೆ ಹಾಗೂ ತೃಣಮೂಲ ಕಾಂಗ್ರೆಸ್ ಸದಸ್ಯರು ತಮ್ಮ ಸ್ಥಾನಗಳಲ್ಲೇ ಎದ್ದು ನಿಂತು ಪ್ರತಿಭಟಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಲೋಕಸಭಾ ಟಿವಿಯು ವಿಪಕ್ಷಗಳ ಮಾತನ್ನು ಪ್ರಸಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ, ನೀವು ಘೋಷಣೆ ಕೂಗೋದನ್ನು ಹಾಗೂ ಸದನಕ್ಕೆ ಅಡ್ಡಿ ಪಡಿಸೋದನ್ನು ಟಿವಿಯಲ್ಲಿ ತೋರಿಸಬೇಕಾ? ದೇಶದ ಜನರು ಈ ದೃಶ್ಯಗಳನ್ನು ನೋಡಬೇಕಾ ಎಂದು ಸವಾಲೆಸೆದರು. ಈ ಪ್ರಶ್ನೆಗೆ ಉತ್ತರಿಸಿದ ಚೌಧರಿ, ಪ್ರತಿಭಟನೆಗಳೂ ಕೂಡಾ ಸಂಸದೀಯ ವ್ಯವಸ್ಥೆಯ ಒಂದು ಭಾಗ ಎಂದು ಹೇಳಿದರು.

ಇತ್ತ ರಾಜ್ಯಸಭೆಯಲ್ಲೂ ಇದೇ ಪರಿಸ್ಥಿತಿ ಮುಂದುವರೆದಿತ್ತು. ಸಚಿವರು ಹಲವು ಮಸೂದೆಗಳನ್ನು ಸದನದಲ್ಲಿ ಮಂಡಿಸಿದರು. ಆದ್ರೆ, ಈ ಎಲ್ಲಾ ಮಸೂದೆಗಳ ಕುರಿತ ಚರ್ಚೆಗಿಂತಲೂ ಇಂಧನ ದರ ಏರಿಕೆ ವಿರೋಧಿಸಿ ವಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯೇ ಮೇಲುಗೈ ಸಾಧಿಸಿತು.

error: Content is protected !! Not allowed copy content from janadhvani.com