janadhvani

Kannada Online News Paper

ರಾಸಲೀಲೆ ಪ್ರಕರಣ: ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ

ಬೆಂಗಳೂರು,ಮಾ.3:ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ರಾಸಲೀಲೆ ಹಗರಣದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ತರಲು ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಸಾರ್ವತ್ರಿಕವಾಗಿ ಕೇಳಿ ಬಂದ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದಾರೆ.

ತಮ್ಮ ಸಹೋದರ ಬಾಲಚಂದ್ರ ಜಾರಕಿಹೊಳಿ ರಾಜೀನಾಮೆ ಪತ್ರ ರವಾನಿಸಿದ್ದು, ತಕ್ಷಣವೇ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಅಂಗೀಕಾರ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದಾರೆ.

ಮಂಗಳವಾರ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅವರು ಪೋಲೀಸ್ ಆಯುಕ್ತರಿಗೆ ದೂರು ನೀಡಿದ ಸ್ವಲ್ಪ ಹೊತ್ತಿನಲ್ಲೇ ರಾಸಲೀಲೆಯ ವಿಡಿಯೋ ದೆಹಲಿಯಲ್ಲಿದ್ದ ಪಕ್ಷದ ವರಿಷ್ಟರಿಗೆ ತಲುಪಿತು. ವರಿಷ್ಠರ ಸೂಚನೆ ಮೇರೆಗೆ ರಮೇಶ್ ಜಾರಕಿಹೊಳಿ ತಮ್ಮ ಹುದ್ದೆ ತ್ಯಜಿಸಿದ್ದಾರೆ.

ಗುರುವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು, ಮುಜುಗರದಿಂದ ತಪ್ಪಿಸಿಕೊಳ್ಳಲು ರಮೇಶ್ ಜಾರಕಿಹೊಳಿ ಈ ತೀರ್ಮಾನ ಕೈಗೊಂಡಿದ್ದಾರೆ.

ರಾಜೀನಾಮೆ ಪತ್ರ ನೀಡಲು ಆಗಮಿಸಿದ್ದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಮಾಧಾನ ಹೇಳಿದ್ದಾರೆ. ತನಿಖೆ ನಡೆದ ನಂತರ ರಮೇಶ್ ಜಾರಕಿಹೊಳಿ ತಪ್ಪಿತಸ್ಥರಲ್ಲ ಎಂಬುದು ಸಾಬೀತಾದರೆ ಮರಳಿ ಸಚಿವ ಸಂಪುಟಕ್ಕೆ ಸೇರಲಿ.ಅವರು ನಿರ್ದೋಷಿ ಎಂಬುದು ಸಾಬೀತಾದರೆ ಒಂದು ದಿನವೂ ತಡಮಾಡದೆ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಸುದ್ದಿಗಾರರ ಜತೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ:ಇದು ವಿರೋಧಿಗಳ ಪಿತೂರಿ,ರಮೇಶ್ ಜಾರಕಿಹೊಳಿ ಯಾವ ತಪ್ಪೂ ಮಾಡಿಲ್ಲ.ಹೀಗಾಗಿ ರಾಜೀನಾಮೆಯ ಅಗತ್ಯವಿಲ್ಲ ಎಂದು ಹೇಳಿದರು.

ಈ ಮಧ್ಯೆ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ರಾಜಕೀಯ ವಲಯಗಳಲ್ಲಿ ಭಾರೀ ಕೋಲಾಹಲವೆಬ್ಬಿಸಿದ್ದು ಪ್ರತಿಪಕ್ಷ ಕಾಂಗ್ರೆಸ್,ಜೆಡಿಎಸ್ ನಾಯಕರು ಬಿಜೆಪಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.

ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು,ಮಾನ ಮರ್ಯಾದೆ ಇದ್ದವರು ಈ ರೀತಿ ಮಾಡಲು ಸಾಧ್ಯವಿಲ್ಲ ಎಂದಿದ್ದರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ: ನನ್ನ ಸರ್ಕಾರವನ್ನು ತೆಗೆದು ರಾಮರಾಜ್ಯವನ್ನು ಸ್ಥಾಪಿಸುತ್ತೇವೆ ಎಂದವರು ಕೊಟ್ಟ ರಾಮರಾಜ್ಯ ಇದೇನೇ?ಎಂದು ಪ್ರಶ್ನಿಸಿದ್ದಾರೆ.

ಈ ಕುರಿತಂತೆ ಹಿರಿಯ ನಾಯಕರಾದ ಹೆಚ್.ವಿಶ್ವನಾಥ್ ಅವರು ಮಾತನಾಡಬೇಕು.ರಾಮರಾಜ್ಯ ತರುತ್ತೇವೆ ಎಂದು ತಾನೇ ಇವರೆಲ್ಲ ಹೊರಟಿದ್ದು?ನೀವು ಬಯಸಿದ ರಾಮರಾಜ್ಯ ಇದೇನಾ?ಅಂತ ಹೇಳಬೇಕು ಎಂದು ವ್ಯಂಗ್ಯವಾಡಿದರು.

error: Content is protected !! Not allowed copy content from janadhvani.com