janadhvani

Kannada Online News Paper

ಸರ್ಕಾರವನ್ನು ಟೀಕಿಸುವುದು ದೇಶದ್ರೋಹವಲ್ಲ- ಸುಪ್ರೀಂಕೋರ್ಟ್

ಹೊಸ ದಿಲ್ಲಿ: ಸರ್ಕಾರದ ವಿರುದ್ಧ ಮಾತನಾಡುವುದು ದೇಶದ್ರೋಹ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.ಕಳೆದ ವರ್ಷ ಜಮ್ಮು ಕಾಶ್ಮೀರಕ್ಕಿದ್ದ ಸಂವಿಧಾನದ 370ನೇ ಪರಿಚ್ಛೇದವನ್ನು ಕೇಂದ್ರ ಸರ್ಕಾರ ತೆಗೆದು ಹಾಕಿತ್ತು. ಇದನ್ನು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಫಾರೂಖ್‌ ಅಬ್ದುಲ್ಲಾ ಕಟು ಶಬ್ದಗಳಿಂದ ಟೀಕೆ ಮಾಡಿದ್ದರು.

ಫಾರೂಖ್‌ ಅವರ ಆಡಿದ ಮಾತುಗಳು ಪಾಕಿಸ್ತಾನ ಹಾಗೂ ಚೀನಾ ಪರವಾಗಿದೆ. ಈ ಎರಡೂ ರಾಷ್ಟ್ರಗಳಿಂದ ಅವರು ಬೆಂಬಲ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ರಜತ್‌ ಶರ್ಮಾ ಹಾಗೂ ಇತರರು ನ್ಯಾಯವಾದಿ ಶಿವ ಸಾಗರ್‌ ತಿವಾರಿ ಅವರ ಮೂಲಕ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಿದ್ದರು.

ಅರ್ಜಿಯ ವಿಚಾರಣೆ ನ್ಯಾ. ಸಂಜಯ್‌ ಕಿಷನ್‌ ಕೌಲ್‌ ಹಾಗೂ ಹೇಮಂತ್‌ ಗುಪ್ತಾ ಅವರಿದ್ದ ಪೀಠದ ಮುಂದೆ ಬಂದಿದ್ದು, ಅರ್ಜಿಯ ವಿಚಾರಣೆಗೆ ಪೀಠ ನಿರಾಕರಿಸಿದೆ. ಅಲ್ಲದೇ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಇರುವುದು ದೇಶ ದ್ರೋಹದ ಪ್ರಕರಣವಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಅರ್ಜಿದಾರರಿಗೆ ₹50,000 ದಂಡ ವಿಧಿಸಿದೆ.

ಕಾಶ್ಮೀರಕ್ಕಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ್ದಕ್ಕೆ ಕಿಡಿ ಕಾರಿದ್ದ ಫಾರೂಖ್‌ ಅಬ್ದುಲ್ಲಾ, ಚೀನಾ ಸಹಾಯದೊಂದಿಗೆ ಕಾಶ್ಮೀರ ಕಣಿವೆಯಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುತ್ತೇವೆ ಎಂದು ಹೇಳಿದ್ದರು.

ಅಬ್ದುಲ್ಲಾ ಈ ಹೇಳಿಕೆ ದೇಶದ ಹಿತಾಸಕ್ತಿಗೆ ಮಾರಕವಾಗಿದ್ದು, ಅವರ ಸಂಸತ್‌ ಸದಸ್ಯತನವನ್ನು ಅಮಾನ್ಯ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಅಬ್ದುಲ್ಲಾ ಅವರ ಹೇಳಿಗೆ ದೇಶ ವಿರೋಧಿ ಹಾಗೂ ದೇಶದ್ರೋಹಿಯಾಗಿದ್ದು ಹೀಗಾಗಿ ಅವರ ಸಂಸತ್‌ ಸದಸ್ಯತ್ವ ರದ್ದು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ವಿನಂತಿ ಮಾಡಲಾಗಿತ್ತು.

error: Content is protected !! Not allowed copy content from janadhvani.com