ಮಂಗಳೂರು, ಫೆ.25: ಇಂದು ಅಪರಾಹ್ನ ಮಂಗಳೂರು ಬೋಂದೆಲ್‌ನಲ್ಲಿರುವ ತನ್ನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ, ಹಾಗೂ ಕರ್ನಾಟಕದ ಮದ್ರಸಾ ರಂಗದಲ್ಲಿ ಅನೇಕ ಬದಲಾವಣೆಗಳಿಗೆ ಮುನ್ನುಡಿ ಬರೆದ ಮುಅಲ್ಲಿಂ ಚಳವಳಿಯ ಮುಂಚೂಣಿ ನಾಯಕ ಆತೂರು ಸಅದ್ ಮುಸ್ಲಿಯಾರ್ (60) ಅವರ ವಿಯೋಗವು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಎಸ್.ವೈ.ಎಸ್.ಕರ್ನಾಟಕ ರಾಜ್ಯ ಸಮಿತಿಯು ಅಭಿಪ್ರಾಯ ಪಟ್ಟಿದೆ.
ಎಲ್ಲರೊಂದಿಗೂ ನಗು ಮುಖದಿಂದ ಬೆರೆಯುವ ಸದಾ ಉತ್ಸಾಹಿಯಾಗಿದ್ದ ಸಅದ್ ಮುಸ್ಲಿಯಾರ್ ಮದ್ರಸಾ ರಂಗದಲ್ಲಿ ಜಾರಿಗೆ ತಂದ ನೂತನ ಕಾರ್ಯ ಯೋಜನೆಗಳು ಸದಾ ಸ್ಮರಣೀಯ.
ಅವರ ಹೆಸರಲ್ಲಿ ಸಂಘಟನಾ ಕುಟುಂಬದ ಎಲ್ಲ ಸದಸ್ಯರು ಖುರ್‌ಆನ್,ತಹ್‌ಲೀಲ್ ಓದಿ ಹದ್ಯಾ ಮಾಡಿ ವಿಶೇಷ ದುಆ ಹಾಗೂ ನಾಳೆ ಜುಮಾ ನಂತರ ಎಲ್ಲಾ ಮಸೀದಿಗಳಲ್ಲಿ ಜನಾಝ ನಮಾಜ್ ನಿರ್ವಹಿಸಬೇಕೆಂದು ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಅಪೇಕ್ಷಿಸಿದ್ದಾರೆ. ಸಅದ್ ಉಸ್ತಾದರು ಪತ್ನಿ, ಎರಡು ಹೆಣ್ಣು ಮಕ್ಕಳು, ಎರಡು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗ,ಅಭಿಮಾನಿ ವೃಂದವನ್ನು ಅಗಲಿದ್ದಾರೆ
ಅವರ ಜನಾಝ ಈಗ ಬೋಂದೆಲ್‌ನ ಮನೆಯಲ್ಲಿದ್ದು ನಾಳೆ ಸುಬಹಿ ನಮಾಝ್‌ನ ಬಳಿಕ ದಫನ ಕಾರ್ಯ ನಡೆಯುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.