ವಾಷಿಂಗ್ಟನ್: ವಿಮಾನದ ಎಂಜಿನ್ ಫೇಲ್ ಆದರೂ, ಬಿಡಿಭಾಗ ಬಿದ್ದರೂ ಅಮೆರಿಕದಲ್ಲಿ ಪ್ರಯಾಣಿಕ ವಿಮಾನವೊಂದು ಸುರಕ್ಷಿತವಾಗಿ ಲ್ಯಾಂಡ್ ಆಗುವ ಮೂಲಕ ಅಚ್ಚರಿ ಮೂಡಿಸಿದೆ. ಅಲ್ಲದೆ ಆಗಬಹುದಾಗಿದ್ದ ಭೀಕರ ದುರಂತವೊಂದು ತಪ್ಪಿದೆ. (ವೀಡಿಯೋ)
ಮೂಲಗಳ ಪ್ರಕಾರ ಅಮೆರಿಕದ ಡೆನ್ವರ್‌ನಿಂದ ಹೊನೊಲುಲುಗೆ ಹೊರಟಿದ್ದ ವಿಮಾನದ ಎಂಜಿನ್ ಮಾರ್ಗ ಮಧ್ಯೆ ತಾಂತ್ರಿಕ ದೋಷಕ್ಕೆ ತುತ್ತಾಗಿ ಬೆಂಕಿ ಹೊತ್ತಿಕೊಂಡು ಹೊತ್ತಿ ಉರಿದಿದೆ. ಅಲ್ಲದೆ ವಿಮಾನ ಆಗಸದಲ್ಲಿ ಹಾರಾಟ ಮಾಡುತ್ತಿದ್ದ ವೇಳೆಯಲ್ಲಿಯೇ ಎಂಜಿನ್ ನ ರಕ್ಷಣಾ ಕವಚ ಕಳಚಿ ಭೂಮಿಗೆ ಬಿದ್ದಿದೆ. ಆದರೂ ಅಪಾಯಕ್ಕೆ ತುತ್ತಾಗಿದ್ದ ಅಮೆರಿಕದ ಯುನೈಟೆಡ್ ಏರ್‌ಲೈನ್ಸ್‌ನ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗುವ ಮೂಲಕ ಅಚ್ಚರಿ ಮೂಡಿಸಿದೆ. ಅಲ್ಲದೆ ಆಗಬಹುದಾಗಿದ್ದ ಭೀಕರ ದುರಂತವೊಂದು ಪೈಲಟ್ ನ ಸಮಯ ಪ್ರಜ್ಞೆಯಿಂದ ತಪ್ಪಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಮಾನದ ಎಂಜಿನ್ ಗೆ ಬೆಂಕಿ ತಗುಲಿದ್ದನ್ನು ವಿಮಾನದಲ್ಲಿದ್ದವರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಬೋಯಿಂಗ್ 777-200- ಯುಎ328 ಸಂಖ್ಯೆಯ ವಿಮಾನವು ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ 12: 15ರಲ್ಲಿ ಹೊನೊಲುಲುಗೆ ಪ್ರಯಾಣ ಬೆಳೆಸಿತ್ತು. ಮಾರ್ಗ ಮಧ್ಯೆ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಇದನ್ನು ಗಮನಿಸಿದ ಪೈಲಟ್ ಕೂಡಲೇ ಏರ್ ಟ್ರಾಫಿಕ್ ಕಂಟೋಲ್ ರೂಂಗೆ ಮಾಹಿತಿ ನೀಡಿದ್ದರೆ. ಬಳಿಕ ವಿಮಾನವನ್ನು ಮರಳಿ ಏರ್ ಪೋರ್ಟ್ ಗೆ ತಿರುಗಿಸಿದ್ದಾರೆ. ಈ ವೇಳೆ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎಂಜಿನ್ ಗೆ ಅಳವಡಿಸಲಾಗಿದ್ದ ರಕ್ಷಣಾ ಕವಚ ಕೂಡ ಉದುರಿ ಕೆಳಗೆ ಮನೆಯೊಂದರ ಆವರಣದಲ್ಲಿ ಬಿದ್ದಿದೆ. ಅದಾಗ್ಯೂ ವಿಮಾನ ಸುರಕ್ಷಿತವಾಗಿ ಡೆನ್ವರ್ ವಿಮಾನ ನಿಲ್ದಾಣ ತಲುಪಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇನ್ನು ವಿಮಾನದಲ್ಲಿ 241 ಪ್ರಯಾಣಿಕರಿದ್ದರು ಮತ್ತು ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ ಎಂದು ವಿಮಾನ ನಿಲ್ದಾಣದ ವಕ್ತಾರರಾದ ಅಲೆಕ್ಸ್ ರೆಂಟೇರಿಯಾ ಹೇಳಿದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಎಲ್ಲ ರೀತಿಯ ಭದ್ರತಾ ಮಾನದಂಡಗಳನ್ನು ಪಾಲಿಸಲಾಗಿತ್ತು. ಆದಾಗ್ಯೂ ಈ ಘಟನೆ ನಡೆದಿದೆ ಎಂದು ಟ್ವೀಟ್ ಮಾಡಿದೆ.
UNITED AIRLINES ENGINE FIRE pic.twitter.com/tDyDdEM03j
— FXHedge (@Fxhedgers) February 20, 2021
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕದ ವಾಯುಯಾನ ಇಲಾಖೆ, ‘ವಿಮಾನ ಟೇಕ್‌ಆಫ್ ಆದ ಸ್ವಲ್ಪ ಸಮಯದಲ್ಲೇ ಬಲ-ಎಂಜಿನ್ ವೈಫಲ್ಯ ಅನುಭವಿಸಿತು. ವಿಮಾನ ಹಾರಾಟ ನಡೆಸುತ್ತಿರುವಾಗಲೇ ಬಿಡಿಭಾಗಗಳನ್ನು ಕೆಳಗೆ ಬೀಳಿಸುತ್ತಾ ಹೋಯಿತು ಎಂಬ ವರದಿಗಳು ನಮ್ಮ ಗಮನಕ್ಕೆ ಬಂದಿವೆ. ಈ ವಿಚಾರವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ವಿಮಾನಯಾನ ಸಂಸ್ಥೆಯಿಂದ ಮಾಹಿತಿ ಕೇಳಿದ್ದೇವೆ ಎಂದು ಹೇಳಿದ್ದಾರೆ.