ರಿಯಾದ್: ಸೌದಿ ಅರೇಬಿಯಾದ ವಿವಿಧ ಬ್ಯಾಂಕುಗಳ ನಡುವೆ ಸ್ಥಳೀಯ ಹಣ ವರ್ಗಾವಣೆಯು ಇನ್ಮುಂದೆ ತ್ವರಿತ ಗತಿಯಲ್ಲಿ ಮುಗಿಸಬಹುದು.ಇದನ್ನು ಸೌದಿ ಸೆಂಟ್ರಲ್ ಬ್ಯಾಂಕ್ ಅನುಮೋದಿಸಿದ್ದು, ಫೆಬ್ರವರಿ 21 ರಿಂದ ಹೊಸ ಯೋಜನೆ ಜಾರಿಗೆ ಬರಲಿದೆ.
ಸೌದಿಯ ವಿವಿಧ ಬ್ಯಾಂಕುಗಳೊಂದಿಗೆ ಮೊದಲ ಹಂತದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಇದು ಹಣಕಾಸು ಸಂಸ್ಥೆಗಳು, ಕಂಪನಿಗಳು ಮತ್ತು ವ್ಯಕ್ತಿಗಳು ವಿವಿಧ ಬ್ಯಾಂಕುಗಳ ನಡುವೆ ಹಣಕಾಸಿನ ವರ್ಗಾವಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ.
ಹೊಸ ಸೇವೆ ವಾರದ ಪ್ರತಿದಿನ ಪೂರ್ಣ ಸಮಯ ಲಭ್ಯವಿರುತ್ತದೆ ಎಂದು ಸೆಂಟ್ರಲ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ. ವೈಶಿಷ್ಟ್ಯವೆಂದರೆ ಸೌದಿ ಪೇಮೆಂಟ್ ಅಭಿವೃದ್ಧಿಪಡಿಸಿದ ವ್ಯವಸ್ಥೆಯನ್ನು ಒಮ್ಮೆ ಆಕ್ಟೀವ್ ಗೊಳಿಸಿದಲ್ಲಿ, ಸ್ಥಳೀಯ ಬ್ಯಾಂಕುಗಳಲ್ಲಿನ ಖಾತೆಗಳ ನಡುವೆ ತ್ವರಿತವಾಗಿ ಹಣ ವರ್ಗಾವಣೆ ಸಾಧ್ಯ. ಇದರ ಶುಲ್ಕವು ಪ್ರಸ್ತುತ ವರ್ಗಾವಣೆ ಶುಲ್ಕಕ್ಕಿಂತ ಕಡಿಮೆಯಾಗಿರಲಿದೆ.