janadhvani

Kannada Online News Paper

ಅಯೋಧ್ಯೆ: ಮಸೀದಿ ನಿರ್ಮಾಣಕ್ಕೆ ತಡೆಯೊಡ್ಡಿದ ಸಹೋದರಿಯರ ಅರ್ಜಿ ವಜಾ

ಲಖನೌ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಲಾಗುತ್ತಿರುವ ಜಾಗ ನಮ್ಮದು ಎಂದು ದೆಹಲಿ ಮೂಲದ ಇಬ್ಬರು ಸಹೋದರಿಯರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ.

ರಾಣಿ ಕಪೂರ್‌ ಅಲಿಯಾಸ್‌ ರಾಣಿ ಬಲೂಜಾ, ರಮಾರಾಣಿ ಪಂಜಾಬಿ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ನಮ್ಮ ಐದು ಎಕರೆ ಜಾಗದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಹೋದರಿಯರು ಆರೋಪಿಸಿದ್ದರು.

ಇಂದು ಅರ್ಜಿಯ ವಿಚಾರಣೆ ವೇಳೆ ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ರಮೇಶ್ ಕುಮಾರ್ ಸಿಂಗ್ ಅವರು, ಸಹೋದರಿಯರ ಮನವಿಯನ್ನು ವಿರೋಧಿಸಿದರು ಮತ್ತು ಮಸೀದಿಗೆ ನಿಗದಿಪಡಿಸಿದ ಪ್ಲಾಟ್ ಸಂಖ್ಯೆಗಳು ಅರ್ಜಿಯಲ್ಲಿ ಉಲ್ಲೇಖಿಸಿದ ಸಂಖ್ಯೆಗಳಿಗಿಂತ ಭಿನ್ನವಾಗಿವೆ ಎಂದು ಹೇಳಿದರು.

ಇನ್ನು ಅರ್ಜಿದಾರರ ಪರ ವಕೀಲ ಎಚ್ ಜಿ ಎಸ್ ಪರಿಹಾರ್ ಅವರು, ತಮ್ಮ ಅರ್ಜಿ ಹಿಂಪಡೆಯುವುದಾಗಿ ಹೇಳಿದ ನಂತರ ನ್ಯಾಯಮೂರ್ತಿಗಳಾದ ಡಿ ಕೆ ಉಪಾಧ್ಯಾಯ ಮತ್ತು ಮನೀಶ್ ಕುಮಾರ್ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಸಹೋದರಿಯರು ಅರ್ಜಿಯಲ್ಲಿ ಹೇಳಿರುವಂತೆ, ತಮ್ಮ ತಂದೆ ಜ್ಞಾನಚಂದ್ರ ಪಂಜಾಬಿ ಅವರು ದೇಶ ವಿಭಜನೆ ಸಂದರ್ಭದಲ್ಲಿ, 1947ರಲ್ಲಿ ಭಾರತಕ್ಕೆ ಬಂದು, ಅಯೋಧ್ಯೆಯಲ್ಲಿ ನೆಲೆಸಿದರು. ‘ಧನ್ನಿಪುರ ಗ್ರಾಮದಲ್ಲಿ ತಂದೆಗೆ ನಜುಲ್‌ ಇಲಾಖೆಯು 28 ಎಕರೆ ಜಮೀನನ್ನು ನೀಡಿತ್ತು. 5 ವರ್ಷಗಳ ಅವಧಿಗೆ ನೀಡಿದ್ದ ಜಮೀನಿನ ಮಾಲೀಕತ್ವ ನಂತರವೂ ಮುಂದುವರಿಯಿತು. ಕಂದಾಯ ಇಲಾಖೆಯಲ್ಲಿರುವ ಜಮೀನಿಗೆ ಸಂಬಂಧಿಸಿದ ದಾಖಲೆಗಳಲ್ಲಿ ತಂದೆ ಹೆಸರನ್ನು ಸೇರಿಸಲಾಗಿತ್ತು. ನಂತರದ ದಿನಗಳಲ್ಲಿ ತಂದೆಯ ಹೆಸರನ್ನು ದಾಖಲೆಗಳಿಂದ ತೆಗೆದು ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ತಂದೆಯವರು ಅಯೋಧ್ಯೆಯಲ್ಲಿನ ನಜುಲ್‌ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಬಳಿಕ ಅಧಿಕಾರಿಗಳು ಪುನಃ ತಂದೆಯವರ ಹೆಸರನ್ನು ದಾಖಲೆಗಳಿಂದ ತೆಗೆದು ಹಾಕಿದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಇದನ್ನು ಪರಿಗಣಿಸದೇ, 28 ಎಕರೆ ಪೈಕಿ 5 ಎಕರೆಯನ್ನು ವಕ್ಫ್‌ ಬೋರ್ಡ್‌ಗೆ ಹಂಚಿಕೆ ಮಾಡಲಾಗಿದೆ ಎಂದು ಅರ್ಜಿದಾರರು ಹೇಳಿದ್ದರು.

ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ನ ನವೆಂಬರ್ 7ರ ತೀರ್ಪಿನ ಅನ್ವಯ ಉತ್ತರ ಪ್ರದೇಶ ಸರ್ಕಾರ ಸುನ್ನಿ ಸೆಂಟ್ರಲ್‌ ವಕ್ಫ್‌ ಬೋರ್ಡ್‌ಗೆ ಐದು ಎಕರೆ ಜಾಗವನ್ನು 2019ರ ನ.7ರಂದು ನೀಡಿತ್ತು. ಈ ನಿವೇಶನದಲ್ಲಿ ಮಸೀದಿ ನಿರ್ಮಾಣಕ್ಕೆ ಜ. 26ರಂದು ಶಿಲಾನ್ಯಾಸ ನೆರವೇರಿಸಲಾಗಿದೆ. ಇದೀಗ ಈ ಜಾಗದ ವಿವಾದದಿಂದಾಗಿ ಮತ್ತೆ ಮಸೀದಿ ನಿರ್ಮಾಣ ಕಾರ್ಯ ಸುದ್ದಿಗೆ ಗ್ರಾಸವಾಗಿತ್ತು.

error: Content is protected !! Not allowed copy content from janadhvani.com