janadhvani

Kannada Online News Paper

ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ: ನಿಯಮಗಳು ಸಿದ್ಧ- ನಿತ್ಯಾನಂದ್ ರೇ

ದೆಹಲಿ: ವರ್ಷದ ಹಿಂದೆ ಜಾರಿಗೆ ಬಂದ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆಯ ಅಡಿಯಲ್ಲಿನ ನಿಯಮಗಳು ರೂಪುಗೊಳ್ಳುತ್ತಿವೆ ಎಂದು ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಲಾಯಿತು.

‘2019ರ ನಾಗರಿಕ (ತಿದ್ದುಪಡಿ) ಕಾಯ್ದೆ (ಸಿಎಎ) ಅನ್ನು 2019ರ ಡಿಸೆಂಬರ್ 12 ರಂದು ಅಧಿಸೂಚಿಸಲಾಗಿದೆ. 2020ರ ಜನವರಿ 10ರಿಂದ ಕಾಯ್ದೆ ಜಾರಿಗೆ ಬಂದಿದೆ,’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೇ ಹೇಳಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆ-2019 ರ ಅಡಿಯಲ್ಲಿನ ನಿಯಮಗಳು ಸಿದ್ಧವಾಗುತ್ತಿವೆ. ನಿಯಮಗಳನ್ನು ರೂಪಿಸಲು ಲೋಕಸಭೆ ಮತ್ತು ರಾಜ್ಯಸಭೆಯ ಸಮಿತಿಗಳು ಕ್ರಮವಾಗಿ ಏಪ್ರಿಲ್ 9 ಮತ್ತು ಜುಲೈ 9 ರವರೆಗೆ ಸಮಯ ಪಡೆದಿವೆ’ ಎಂದು ಅವರು ಲಿಖಿತ ಉತ್ತರದಲ್ಲಿ ಹೇಳಿದರು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದ, ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ- ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡಲು ಅನುಕೂಲವಾಗುವ ಸಿಎಎ ಅನ್ನು 2019 ರ ಡಿಸೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿತ್ತು. ಈ ಕಾನೂನಿನ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.

ದೇಶವ್ಯಾಪಿ NRC ಜಾರಿ ಇಲ್ಲ:

‘ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕಾರ್ಯವನ್ನು ದೇಶದಾದ್ಯಂತ ಜಾರಿಗೊಳಿಸುವ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಗೃಹ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ಸ್ಪಷ್ಟಪಡಿಸಿದೆ.

ವಿವಿಧ ವೇದಿಕೆಗಳಲ್ಲಿ ಆಗಿಂದಾಗ್ಗೆ ಈ ಅಂಶವನ್ನು ಸ್ಪಷ್ಟಪಡಿಸಲಾಗಿದೆ. ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಚಿವಾಲಯವು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ. ವರದಿಯನ್ನು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಲಾಯಿತು.

ಎನ್‌ಆರ್‌ಸಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅಸ್ಸಾಂನಲ್ಲಿ ಭಾರತೀಯ ಪೌರರಲ್ಲದವರನ್ನು ಗುರುತಿಸಲು ಕೈಗೊಳ್ಳಲಾಗಿತ್ತು. ಇದು, ದೇಶವ್ಯಾಪಿ ವಿಸ್ತರಣೆ ಆಗಬಹುದು ಎಂಬ ಆತಂಕ ನಿರ್ಮಾಣವಾಗಿತ್ತು.

ಅಸ್ಸಾಂನಲ್ಲಿ 3.3 ಕೋಟಿ ಜನರು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 3.11 ಕೋಟಿ ಜನರ ಪಟ್ಟಿ ರೂಪಿಸಲಾಗಿದೆ. ಉಳಿದವರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆಗಸ್ಟ್ 2019ರಲ್ಲಿ ಪ್ರಕಟಿಸಲಾದ ಅಂತಿಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

error: Content is protected !! Not allowed copy content from janadhvani.com