janadhvani

Kannada Online News Paper

ರಾಷ್ಟ್ರಪತಿ ಭಾಷಣ ಬಹಿಷ್ಕಾರಕ್ಕೆ 16 ವಿಪಕ್ಷಗಳ ನಿರ್ಧಾರ

ನವದೆಹಲಿ, ಜ 28: ಶುಕ್ರವಾರದಿಂದ ಸಂಸತ್ತಿನ ಬಜೆಟ್ ಆರಂಭವಾಗಲಿದ್ದು, ರಾಷ್ಟ್ರಪತಿ ಜಂಟಿ ಭಾಷಣದ ಕಲಾಪ ಬಹಿಷ್ಕರಿಸಲು 16 ವಿಪಕ್ಷಗಳು ನಿರ್ಧರಿಸಿವೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಹೇಳಿದ್ದಾರೆ.ಕೇಂದ್ರದ ನೂತನ ಕೃಷಿ ಸುದಾರಣಾ ಕಾಯಿದೆ ವಿರೋಧಿಸಿ ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.

ಕೊರೋನಾ ಮತ್ತು ಲಾಕ್​ಡೌನ್ ನಂತರ ಮಂಡನೆ ಆಗುತ್ತಿರುವ ಮೊದಲ ಬಜೆಟ್ ಇದಾಗಿರುವುದರಿಂದ ಈ ಬಜೆಟ್ ತೀವ್ರ ಕುತೂಹಲ ಮೂಡಿಸಿದೆ. ಕೊರೋನಾದಿಂದಾಗಿ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಸೃಷ್ಟಿಯಾಗಿದ್ದು ಆರ್ಥಿಕ ಪುನಶ್ಚೇತನಕ್ಕೆ ಪೂರಕವಾದ ಬಜೆಟ್ ಮಂಡಿಸುವ ಗುರುತರ ಹೊಣೆಗಾರಿಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲಿದೆ. ಫೆಬ್ರವರಿ 1 ರಂದು ಅವರು ಬಜೆಟ್​ ಮಂಡಿಸಲಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್​ ಜನವರಿ 29 ರಂದು ಲೋಕಸಭೆ ಮತ್ತು ರಾಜ್ಯಸಭೆ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೆ, ಬಜೆಟ್ ಅಧಿವೇಶನ ಪ್ರಾರಂಭವಾಗುವ ಮುನ್ನ ಜನವರಿ 29 ರಂದು ರಾಷ್ಟ್ರಪತಿ ಸಂಸತ್ತಿನಲ್ಲಿ ಮಾಡುವ ಭಾಷಣವನ್ನು ಬಹಿಷ್ಕರಿಸುವುದಾಗಿ 16 ವಿರೋಧ ಪಕ್ಷಗಳ ನಾಯಕರು ಇಂದು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾಯ್ದೆಯ ವಿರುದ್ಧ ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಆರಂಭದಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದವು. ಆದರೆ, ಕೊರೋನಾ ಲಾಕ್​ಡೌನ್ ಸಂದರ್ಭವನ್ನು ಬಳಸಿಕೊಂಡಿದ್ದ ಕೇಂದ್ರ ಬಿಜೆಪಿ ಸರ್ಕಾರ ಲಾಕ್​ಡೌನ್ ಸಂದರ್ಭದಲ್ಲಿ ಕೃಷಿ ಕಾಯ್ದೆಗಳ ಬಗ್ಗೆ ಸಂಸತ್​ನಲ್ಲಿ ಚರ್ಚೆ ನಡೆಸದೆ ಸುಗ್ರೀವಾಜ್ಞೆ ಮೂಲಕ ಈ ವಿವಾದಾತ್ಮಕ ಕಾಯ್ದೆಯನ್ನು ಜಾರಿಗೆ ತಂದಿತ್ತು.

ಇದೀಗ ಈ ಕಾಯ್ದೆಯ ವಿರುದ್ಧ ದೇಶದಾದ್ಯಂತ ರೈತ ಸಮೂಹ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತಿದೆ. ಪಂಜಾಬ್ ಹರಿಯಾಣ ರಾಜ್ಯದ ರೈತರು ಕಳೆದ ಎರಡು ತಿಂಗಳಿನಿಂದ ಮಳೆ ಚಳಿ ಬಿಸಿಲೆನ್ನದೆ ದೆಹಲಿಯ ಹೊರ ವಲಯದಲ್ಲಿ ಹೋರಾಟದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಈ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿರುವ ವಿರೋಧ ಪಕ್ಷಗಳು, “ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯುವವರೆಗೆ ನಾವು ಅಧಿವೇಶನಕ್ಕೆ ಭಾಗಿಯಾಗುವುದಿಲ್ಲ. ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸುತ್ತೇವೆ. ಅಲ್ಲದೆ, ಪ್ರತಿಭಟನಾ ನಿರತ ರೈತರ ಜೊತೆಗೆ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ” ಎಂದು ಹೇಳಿಕೆ ಬಿಡುಗಡೆ ಮಾಡಿವೆ.

ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್, ಎನ್‌ಸಿಪಿ, ಡಿಎಂಕೆ, ಟಿಎಂಸಿ, ಶಿವಸೇನೆ, ಸಮಾಜವಾದಿ ಪಕ್ಷ, ಆರ್‌ಜೆಡಿ, ಸಿಪಿಐ, ಸಿಪಿಐ (ಎಂ) ಮತ್ತು ಪಿಡಿಪಿ ಸೇರಿದಂತೆ ಒಟ್ಟು 16 ಪ್ರಮುಖ ಪಕ್ಷಗಳ ನಾಯಕರು, “ಈ ಕೃಷಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ರಾಜ್ಯಗಳ ಹಕ್ಕುಗಳ ಮೇಲೆ ಆಕ್ರಮಣ ನಡೆಸಿದೆ ಮತ್ತು ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸಿದೆ” ಎಂದು ಆರೋಪಿಸಿ ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸುವ ಬೆದರಿಕೆ ಒಡ್ಡಿವೆ.

“ಈ ಕಾನೂನುಗಳನ್ನು ಯಾವುದೇ ಸಮಾಲೋಚನೆ ಹಾಗೂ ಸಂಸತ್​ನಲ್ಲಿ ಚರ್ಚಿಸದೆ ಜಾರಿಗೆ ತರಲಾಗಿದೆ. ಈ ಕಾನೂನಿನಲ್ಲಿ ರಾಷ್ಟ್ರೀಯ ಒಮ್ಮತದ ಕೊರತೆಯಿದೆ. ಅಲ್ಲದೆ, ಪ್ರತಿಪಕ್ಷವನ್ನು ಗೊಂದಲಗೊಳಿಸಿ, ಸಂಸತ್ತಿನ ಪರಿಶೀಲನೆಯಿಲ್ಲದೆ ಕಾನೂನನ್ನು ಬೈಪಾಸ್ ಮಾಡಲಾಗಿದೆ” ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಇನ್ನು ವಿವಾದಿತ ಕೃಷಿ ಕಾನೂನುಗಳಲ್ಲದೆ, ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಭಾರತ ಮತ್ತು ಚೀನಾ ನಡುವಿನ ಸೇನಾ ಘರ್ಷಣೆ ವಿಷಯ ಕಾರಣ ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಲು ತೀರ್ಮಾನಿಸಲಾಗಿದ್ದು, ಇನ್ನು ವಿರೋಧ ವ್ಯಕ್ತ ಪಡಿಸುವ 16 ಪಕ್ಷಗಳ ನಾಯಕರ ಜಂಟಿ ಹೇಳಿಕೆಯ ಪಟ್ಟಿಯನ್ನು ಅಜಾದ್ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಡಿಎಂಕೆ, ಎಡಪಕ್ಷಗಳು, ಟಿಎಂಸಿ ಸೇರಿದಂತೆ ಅನೇಕ ಪಕ್ಷಗಳ ನಾಯರು ಸಹ ಮತ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com