ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಆಗುತ್ತಿದ್ದರೂ, ಕೊರೊನಾ ಕಾರಣಗಳಿಂದ ಜನಸಾಮಾನ್ಯರು ಕಷ್ಟದಲ್ಲಿದ್ದರೂ, ಸಾರ್ವಜನಿಕರು ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಲೆಕ್ಕಿಸದ ಸರ್ಕಾರಿ ಒಡೆತನದ ತೈಲ ಕಂಪನಿಗಳು ಸತತವಾಗಿ ಬೆಲೆ ಏರಿಕೆಯಲ್ಲಿ ನಿರತವಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ
ನವದೆಹಲಿ: ದೇಶದಲ್ಲಿ ದಿನ ಕಳೆದಂತೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಮತ್ತಷ್ಟು ತುಟ್ಟಿಯಾಗುತ್ತಿದೆ.
ಶನಿವಾರ ಕೂಡ ಸರ್ಕಾರಿ ತೈಲ ಸಂಸ್ಥೆಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಭಾರೀ ಏರಿಕೆ ಮಾಡಿವೆ. ಈ ಮೂಲಕ ತೈಲ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್’ಗೆ 25 ಪೈಸೆ ಹೆಚ್ಚಳಗೊಂಡಿದ್ದು, ಪ್ರತೀ ಲೀಟಲ್ ಪೆಟ್ರೋಲ್ ದರ ರೂ. 85.70ಕ್ಕೆ ಏರಿಕೆಯಾಗಿದೆ. ಇದರಂತೆ ಡೀಸೆಲ್ ದರ ಕೂಡ ಲೀಟರ್’ಗೆ 25 ಪೈಸೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ ರೂ.75.88ಕ್ಕೆ ತಲುಪಿದೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದ್ದು, ಕ್ರಮವಾಗಿ ಲೀಟರ್‌ಗೆ 93.59 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 83.85 ರೂ. ತಲುಪಿದೆ.
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನ ಪ್ರತೀ ಲೀಟರ್ ಪೆಟ್ರೋಲ್ ದರ ರೂ.88.59ಕ್ಕೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ರೂ.80.47ಕ್ಕೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯ ವಿಚಾರ. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಏರಿಕೆ ಆಗದಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಆಗುತ್ತಿದ್ದರೂ, ಕೊರೊನಾ ಕಾರಣಗಳಿಂದ ಜನಸಾಮಾನ್ಯರು ಕಷ್ಟದಲ್ಲಿದ್ದರೂ, ಸಾರ್ವಜನಿಕರು ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಲೆಕ್ಕಿಸದ ಸರ್ಕಾರಿ ಒಡೆತನದ ತೈಲ ಕಂಪನಿಗಳು ಸತತವಾಗಿ ಬೆಲೆ ಏರಿಕೆಯಲ್ಲಿ ನಿರತವಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಇದೇ ರೀತಿ ಇಂಧನದ ಬೆಲೆ ಏರಿಕೆ ಮುಂದುವರೆದರೆ 1 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸೆಂಚುರಿ ಬಾರಿಸುವ ದಿನವೂ ದೂರವೇನಿಲ್ಲ ಎಂದು ಹೇಳಲಾಗುತ್ತಿದೆ.