ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಗಡಿ ನಿಯಂತ್ರಣ ರೇಖೆ ಬಳಿ ಭಾರತಕ್ಕೆ ಸೇರಿರುವ ಭೂ ಪ್ರದೇಶದಲ್ಲಿ ಚೀನಾ ಹಳ್ಳಿಯನ್ನು ನಿರ್ಮಿಸಿದೆ. ಆದರೆ ಈ ವಿಷಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನವಾಗಿರುವುದು ಅಕ್ಷಮ್ಯ ಎಂದು AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಅರುಣಾಚಲ ಪ್ರದೇಶ, ಲಡಾಖ್, ಸಿಕ್ಕಿಂನ ಎಲ್ಎಸಿ ಬಳಿ ಚೀನಾದ ಪಿಎಲ್‌ಎ ಸೇನೆ ನಿರಂತರವಾಗಿ ಭಾರತದ ಭೂಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಿದೆ. ಆದರೆ ಪ್ರಧಾನಿ ಮೋದಿ ಮಾತ್ರ ಇವೆಲ್ಲವನ್ನು ನೋಡಿಕೊಂಡು ಮೌನವಾಗಿರುವುದು ಖಂಡನೀಯ ಎಂದು ಅಸದುದ್ದೀನ್ ಒವೈಸಿ ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಶಾಶ್ವತ ಗಡಿ ಗ್ರಾಮಗಳನ್ನು ಚೀನಾ ಮೂರು ಹೊಸ ಹಳ್ಳಿಯನ್ನಾಗಿ ನಿರ್ಮಿಸುತ್ತಿದೆ. ಇದು ಚೀನಿ ಸೇನೆಯ ಚಟುವಟಿಕೆಗಳಿಗೂ ಅನುಕೂಲ ಕಲ್ಪಿಸುತ್ತದೆ. ಚೀನಾದ PLA ಸೇನೆ ಭಾರತೀಯ ಭೂ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತಿದ್ದು, ಪ್ರಧಾನಿ ಮೋದಿ ಈ ಕುರಿತು ಯಾಕೆ ಸುಮ್ಮನಿದ್ದಾರೆ ಇದರ ಉದ್ದೇಶವೇನು ಎಂಬುದು ದೇಶಕ್ಕೆ ತಿಳಿಸಬೇಕಾಗಿದೆ. ಪ್ರಧಾನಿ ತಮ್ಮ ಮೌನವನ್ನು ಬಿಟ್ಟು ಗಡಿ ಘರ್ಷಣೆ ಕುರಿತು ಮಾತನಾಡಬೇಕು ಎಂದು ಒವೈಸಿ ಮನವಿ ಮಾಡಿದ್ದಾರೆ.