janadhvani

Kannada Online News Paper

ಖುರ್‌ಆನ್ ವಿರುದ್ಧ ಮತಿಗೆಟ್ಟ ಹೇಳಿಕೆ ನೀಡಿದ ಸ್ವಾಮೀಜಿ- ಕಠಿಣ ಕ್ರಮಕ್ಕೆ ಮುಸ್ಲಿಂ ಒಕ್ಕೂಟ ಆಗ್ರಹ

ಮಂಗಳೂರು: ಇತ್ತೀಚೆಗೆ ಚೌಧುರಿ ಚರಣ್ ಸಿಂಗ್ ಯುನಿವರ್ಸಿಟಿಯಲ್ಲಿ ನಡೆದ ಸೆಮಿನಾರ್ ನಲ್ಲಿ ಸ್ವಾಮಿ ಆನಂದ್ ಸ್ವರೂಪ್ ರವರು ಮತಿಭ್ರಮಣೆಯಾದಂತೆ ಮಾತನಾಡುತ್ತಾ, ಮುಸ್ಲಿಮರನ್ನು ಅವಹೇಳನ ಮಾಡಿ ನಮಾಜ್ ಹಾಗೂ ಖುರ್‌ಆನ್ ಗ್ರಂಥವನ್ನು ನಿಂದಿಸಿರುವುದು ಖಂಡನೀಯವಾಗಿದೆ.

ಮಾತ್ರವಲ್ಲ ಈ ಹೇಳಿಕೆ ಕೋಮುಗಲಭೆ ಸ್ರಷ್ಟಿಸುವ ಹುನ್ನಾರವಾಗಿದೆ. ಆದುದರಿಂದ ಇವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್ ರವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

“ಕುರಾನ್ ಪಠಿಸುವವರು ರಾಕ್ಷಸ ರಾಗುತ್ತಾರೆ, ಅವರು ಮನುಷ್ಯ ರಾಗಿರುವುದಿಲ್ಲ, ಯಾರಿಗಾದರೂ ಭಾರತದಲ್ಲಿ ಇರಬೇಕೆಂದು ಇಚ್ಚೆಯಿದ್ದರೆ ಅವರು ನಮಾಝ್ ಮತ್ತು ಖುರ್‌ಆನ್ ಅನ್ನು ತ್ಯಜಿಸಬೇಕು, ಇಲ್ಲದಿದ್ದರೆ ನಾವೆಲ್ಲರೂ ಸೇರಿ ಅವರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಹಿಷ್ಕಾರ ಮಾಡಿದರೆ ಅವರು ಹಿಂದೂ ಧರ್ಮಕ್ಕೆ ಮತಾಂತರವಾಗುತ್ತಾರೆ” ಎಂಬಿತ್ಯಾದಿಯಾಗಿ ಅವಹೇಳನಾತ್ಮಕ ಹೇಳಿಕೆ ನೀಡಿರುವ ಸ್ವಾಮೀಜಿ ಮಾನಸಿಕ ಸಮತೋಲನವನ್ನು ಕಳೆದುಕೊಂಡಿರಬಹುದೇ ಎಂಬ ಸಂಶಯವನ್ನೂ ಮೂಡಿಸುತ್ತದೆ. ಆದುದರಿಂದ ಇವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಅಗತ್ಯವೂ ಇದೆ ಎಂದು ಅಶ್ರಫ್ ರವರು ತಿಳಿಸಿದ್ದಾರೆ.

ಭಾರತವು ಎಲ್ಲಾ ಜಾತಿ ಧರ್ಮದವರಿಗೂ ಸಮಾನ ಅವಕಾಶವನ್ನು ನೀಡಿರುವ, ಒಂದು ಉತ್ತಮ ಸಂವಿಧಾನವನ್ನು ಹೊಂದಿರುವ, ಜಾತ್ಯಾತೀತ ರಾಷ್ಟ್ರವಾಗಿದೆ. ಇಲ್ಲಿ ಎಲ್ಲರಿಗೂ ಅವರವರ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಇದೆ. ಸ್ವಾಮೀಜಿಗಳ ಹೇಳಿಕೆ ಅಪರಾಧನೀಯ ಮತ್ತು ಭಾರತದ ಜಾತ್ಯಾತೀತ ನೆಲೆಗಟ್ಟನ್ನು ದ್ವಂಸ ಗೊಳಿಸುವ ಹೇಳಿಕೆ ಆಗಿದೆ.

ಸ್ವಾಮಿ ಆನಂದ್ ಸ್ವರೂಪ್ ಖುರ್‌ಆನ್ ಮತ್ತು ನಮಾಝ್ ನ ಪದ ಬಳಕೆ ಮಾಡಿ ಮತೀಯ ಸಂಘರ್ಷ ಮೂಡಿಸಲು ಪ್ರಯತ್ನಿಸಿದ್ದಾರೆ. ಜನಸಾಮಾನ್ಯರು ಇವರ ಈ ದುರುದ್ದೇಶವನ್ನು ಅರ್ಥಮಾಡಿಕೊಂಡು ಇಲ್ಲಿನ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಅಶ್ರಫ್ ರವರು ಮನವಿ ಮಾಡಿದ್ದಾರೆ.

ದೇಶದಾದ್ಯಂತ ರೈತರು ತಮ್ಮ ಹಕ್ಕಿಗಾಗಿ ತೀವ್ರವಾಗಿ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಸ್ವಾಮೀಜಿಯ ಈ ಹೇಳಿಕೆ ಜನರ ಗಮನವನ್ನು ಬೇರೆ ಕಡೆ ತಿರುಗಿಸಲು ಮಾಡಿರುವ ಹುನ್ನಾರದಂತೆಯೂ ಕಂಡುಬರುತ್ತದೆ.

ಖುರ್‌ಆನ್ ಬಹಳ ಪವಿತ್ರವಾದ ಗ್ರಂಥ. ಇದರ ಸಂದೇಶ ಎಲ್ಲಾ ಕಾಲಕ್ಕೂ ಉಪಯುಕ್ತ. ಖುರ್‌ಆನ್ ಶಾಂತಿ, ಪ್ರೀತಿ, ಸ್ನೇಹ, ಸೌಹಾರ್ದತೆ ಮತ್ತು ಸಮಾನತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ.

ಸ್ವಾಮೀಜಿಯ ಅಸಂಬದ್ಧ ಹೇಳಿಕೆ ಭಾರತದ ಸಂವಿಧಾನಕ್ಕೂ ಅಪಚಾರವಾಗಿದೆ. ಆದುದರಿಂದ ಸರ್ವಧರ್ಮೀಯರು ಒಗ್ಗಟ್ಟಾಗಿ ಈ ಹೇಳಿಕೆಯನ್ನು ಖಂಡಿಸುವ ಅಗತ್ಯ ಇದೆ ಎಂದು ಅಶ್ರಫ್ ರವರು ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com