ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ. ಅಲ್ಲದೆ, ಕೃಷಿ ಕಾಯ್ದೆಗಳ ಕುರಿತಂತೆ ಮಾತುಕತೆ ನಡೆಸಲು ಸಮಿತಿಯೊಂದನ್ನು ರಚಿಸಿದೆ.
ಸಂಸತ್ತು ಅಂಗೀಕರಿಸಿರುವ ಮೂರು ಕೃಷಿ ಕಾಯ್ದೆ ಮತ್ತು ಪ್ರತಿಭಟನಾಕಾರ ರೈತರನ್ನು ದೆಹಲಿಯ ಗಡಿಯಿಂದ ತೆರವು ಮಾಡಬೇಕು ಎಂದು ಸಲ್ಲಿಸಿದ್ದ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಿತು.ವಾದ ವಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಕಾಯ್ದೆಗಳಿಗೆ ಮುಂದಿನ ಆದೇಶದ ವರೆಗೆ ತಡೆ ನೀಡಿತು. ಮಾತುಕತೆಗಾಗಿ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿತು.
ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ, ‘ಕಾನೂನುಗಳ ಸಿಂಧುತ್ವದ ಬಗ್ಗೆ ಮತ್ತು ಪ್ರತಿಭಟನೆಯಿಂದಾಗಿ ಜನಜೀವನಕ್ಕೆ ಆಗುತ್ತಿರುವ ತೊಂದರೆ ಬಗ್ಗೆ ನಾವು ಕಾಳಜಿ ಹೊಂದಿದ್ದೇವೆ. ನಮ್ಮ ಅಧಿಕಾರ ವ್ಯಾಪ್ತಿಗೆ ಒಳಪಟ್ಟು ಈ ಸಮಸ್ಯೆಯನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಒಂದೋ ಕಾಯ್ದೆಯನ್ನು ಅಮಾನತುಗೊಳಿಸಬಹುದು. ಅಥವಾ ಸಮಿತಿಯನ್ನು ರಚಿಸಬಹುದು. ಈ ಅಧಿಕಾರ ನಮಗಿದೆ,’ ಎಂದು ಹೇಳಿದರು.
ಕೃಷಿ ಕಾಯ್ದೆಯನ್ನು ಪ್ರಶ್ನೆ ಮಾಡಿರುವ ವಕೀಲ ಎಂ.ಎಲ್.ಶರ್ಮಾ ಈ ವೇಳೆ ಮಧ್ಯಪ್ರವೇಶಿಸಿ, ‘ನ್ಯಾಯಾಲಯ ರಚಿಸುವ ಯಾವುದೇ ಸಮಿತಿಯ ಮುಂದೆ ಹಾಜರಾಗುವುದಿಲ್ಲ ಎಂದು ರೈತರು ಹೇಳಿದ್ದಾರೆ,’ ಎಂದು ನ್ಯಾಯಾಲಯಕ್ಕೆ ಹೇಳಿದರು.
‘ಈ ಸಮಿತಿ ನಮಗಾಗಿ. ಸಮಸ್ಯೆಯನ್ನು ಪರಿಹರಿಸುವ ನಿರೀಕ್ಷೆಯಿರುವ ನೀವೆಲ್ಲರೂ ಈ ಸಮಿತಿಯ ಮುಂದೆ ಹೋಗಬೇಕು. ಅದು ಯಾವುದೇ ಆದೇಶವನ್ನಾಗಲಿ, ಶಿಕ್ಷೆಯನ್ನಾಗಲಿ ನೀಡುವುದಿಲ್ಲ. ಅದು ನಮಗೆ ವರದಿಯನ್ನು ಮಾತ್ರ ಸಲ್ಲಿಸುತ್ತದೆ,’ ಎಂದು ಸಿಜೆಐ ಹೇಳಿದರು.
‘ ನಾವು ಸಮಿತಿಯೊಂದನ್ನು ರಚನೆ ಮಾಡುತ್ತಿದ್ದೇವೆ. ಆಗ ಮಾತ್ರ ಸಂಪೂರ್ಣ ಚಿತ್ರಣ ಸಿಗಲು ಸಾಧ್ಯ. ರೈತರು ಸಮಿತಿ ಮುಂದೆ ಬರುವುದಿಲ್ಲ ಎಂಬ ವಾದಗಳೆಲ್ಲ ನಮಗೆ ಬೇಕಾಗಿಲ್ಲ. ನಾವು ಸಮಸ್ಯೆಯನ್ನು ಬಗೆಹರಿಸಲು ನೋಡುತ್ತಿದ್ದೇವೆ. ಒಂದು ವೇಳೆ ನೀವು (ರೈತರು) ಅನಿರ್ದಿಷ್ಟಾವಧಿ ಆಂದೋಲನ ಮುಂದುವರಿಸುವುದೇ ಆದರೆ, ನೀವು ಮುಂದುವರಿಸಬಹುದು,’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬಡೆ ಹೇಳಿದರು.
ವಕೀಲ ಎಂ.ಎಲ್.ಶರ್ಮಾ ವಾದ ಮಂಡಿಸುತ್ತಾ, ‘ಅನೇಕರು ಚರ್ಚೆಗೆ ಬಂದರು. ಆದರೆ ಮುಖ್ಯದಾದ ವ್ಯಕ್ತಿ, ಪ್ರಧಾನಿಯೇ ಬಂದಿಲ್ಲ ಎಂದು ರೈತರು ಹೇಳುತ್ತಿದ್ದಾರೆ,’ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ‘ಪ್ರಧಾನಿ ಹೋಗಬೇಕೆಂದು ಹೇಳಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಅವರು ಯಾವುದೇ ಅರ್ಜಿದಾರರಲ್ಲ,’ ಎಂದರು.
‘ಸಮಿತಿಯು ಈ ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿರುತ್ತದೆ. ನಾವು ಕಾನೂನುಗಳನ್ನು ಅಮಾನತುಗೊಳಿಸಲು ಯೋಜಿಸುತ್ತಿದ್ದೇವೆ. ಆದರೆ, ಅದು ಅನಿಶ್ಚಿತ,’ ಎಂದು ಮುಖ್ಯನ್ಯಾಯಮೂರ್ತಿ ಹೇಳಿದರು.