janadhvani

Kannada Online News Paper

ವೈರಸ್ ಅಪಾಯ ತಗ್ಗಿಲ್ಲ, ಕಿಂಚಿತ್ತೂ ನಿರ್ಲಕ್ಷ್ಯ ಸಲ್ಲದು- ಮುಖ್ಯಮಂತ್ರಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ಅಪಾಯ ಇನ್ನೂ ತಗ್ಗಿಲ್ಲ, ಈ ನಿಟ್ಟಿನಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕಿಂಚಿತ್ತೂ ನಿರ್ಲಕ್ಷ್ಯ ಸಲ್ಲದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ರೂಪಾಂತರ ಹಾಗೂ ಎರಡನೇ ಅಲೆಯ ಆತಂಕದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕೆಲವೊಂದು ಬಿಗುವಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಏಳು ಕೋವಿಡ್ ರೂಪಾಂತರಿ ಸೋಂಕು ಪ್ರಕರಣಗಳು ರಾಜ್ಯದಲ್ಲಿ ಅಧಿಕೃತಗೊಂಡಿದೆ.

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ‘ಕೊರೊನಾ ಅಪಾಯ ಇನ್ನೂ ತಗ್ಗಿಲ್ಲ. ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಹೊತ್ತಿನಲ್ಲಿ ಸಾಂಕ್ರಾಮಿಕದ ಬಗ್ಗೆ ಕಿಂಚಿತ್ತೂ ನಿರ್ಲಕ್ಷ್ಯ ಸಲ್ಲದು. ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಪಾಲಿಸಿ, ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸಹಕರಿಸಿ, ಸುರಕ್ಷಿತವಾಗಿರಿ’ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಕೋವಿಡ್‌ ರೂಪಾಂತರ ಪ್ರಕರಣ ದೇಶದಲ್ಲಿ 20 ಜನರಲ್ಲಿ ಪತ್ತೆಯಾಗಿದೆ. ರಾಜ್ಯದ 7 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪಾರ್ಟ್ಮೆಂಟ್‌ ಒಂದನ್ನು ಸೀಲ್‌ಡೌನ್ ಮಾಡಲಾಗಿದೆ. ಆದರೆ ಸದ್ಯ ಲಾಕ್‌ಡೌನ್‌ ಮಾಡುವ ಯಾವುದೇ ಉದ್ದೇಶ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಹೀಗಿದ್ದರೂ ಹೊಸ ವರ್ಷ ಆಚರಣೆಯ ಹಿನ್ನೆಲೆಯಲ್ಲಿ ಕೋವಿಡ್‌ ಹರಡದಂತೆ ರಾಜ್ಯ ಸರ್ಕಾರ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದವರ ಮುಂದುವರಿದ ಭಾಗವಾಗಿ ಜನರು ಎಚ್ಚರಿಕೆಯಿಂದ ಇರುವಂತೆ ಸಿಎಂ ಬಿಎಸ್‌ ಯಡಿಯೂರಪ್ಪ ಮನವಿ ಮಾಡಿದ್ದಾರೆ.

error: Content is protected !! Not allowed copy content from janadhvani.com