janadhvani

Kannada Online News Paper

ಬ್ರಿಟನ್ ಕೊರೋನಾ ಭೀತಿ: ರಾತ್ರಿ ಕರ್ಫ್ಯೂ ಡಿ.24 ರಿಂದ ಜಾರಿ- ಸಿಎಂ ಸ್ಪಷ್ಟನೆ

ಬೆಂಗಳೂರು, ಡಿ.23: ಬ್ರಿಟನ್ನ ಹೊಸ ರೂಪಾಂತರದ ಕೊರೋನಾ ವೈರಸ್ ಆತಂಕದ ಹಿನ್ನಲೆ ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿತ್ತು. ಅದನ್ನು ಬದಲಿಸಿ ನಾಳೆಯಿಂದ ಅಂದರೆ ಡಿ. 24ರಿಂದ ಜ. 1ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 10ರ ಬದಲು ರಾತ್ರಿ 11 ರಿಂದ ಬೆಳಿಗ್ಗೆ 5ರವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಇಂದು ಮಧ್ಯಾಹ್ನ ಆದೇಶಿಸಿತ್ತು.

ಆದರೆ, ವರ್ಷಾಂತ್ಯದಲ್ಲಿ ಈ ರೀತಿ ಕರ್ಫ್ಯೂ ಜಾರಿ ಮಾಡುವುದರಿಂದ ಬಾರ್ ಅಂಡ್ ರೆಸ್ಟೋರೆಂಟ್, ಓಲಾ, ಉಬರ್ ಸೇರಿದಂತೆ ಅನೇಕ ಉದ್ಯಮಗಳಿಗೆ ನಷ್ಟವಾಗಲಿದೆ ಎಂಬ ವಿರೋಧ ಎಲ್ಲೆಡೆ ವ್ಯಕ್ತವಾಗಿತ್ತು. ಈ ನೈಟ್ ಕರ್ಫ್ಯೂನಿಂದಾಗಿ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಸಮಯದ ಅಧಿಕ ವಹಿವಾಟಿಗೆ ಹೊಡೆತ ಬೀಳಲಿದೆ. ಈ ಹಿನ್ನಲೆ ಈ ಕರ್ಫ್ಯೂ ಅವಧಿಯನ್ನು ಒಂದೂವರೆ ಗಂಟೆಗಳ ಕಾಲ ತಡವಾಗಿ ಹೇರುವಂತೆ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಸೇರಿದಂತೆ ಹಲವರು ಬೇಡಿಕೆ ಇರಿಸಿದ್ದರು. ಈ ಬೇಡಿಕೆ ಮನಗಂಡ ಸರ್ಕಾರ ಬದಲಾವಣೆ ನಡೆಸಿದೆ.

ಈ ಕುರಿತು ತಮ್ಮ ಟ್ವೀಟರ್ನಲ್ಲಿ ಸ್ಪಷ್ಟಪಡಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಇದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂವನ್ನು ನಾಳೆಯಿಂದ ಅಂದರೆ ದಿನಾಂಕ 24ರಿಂದ ಜನವರಿ 1ರವರೆಗೆ ಜಾರಿ ಮಾಡಲಾಗಿದೆ. ರಾತ್ರ 10ರ ಬದಲಿಗೆ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದಿದ್ದಾರೆ.

ಅಲ್ಲದೇ ಈ ನೈಟ್ ಕರ್ಫ್ಯೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿ. 24ರಂದು ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಾಗದಂತೆ ಕ್ರಮ ವಹಿಸಲಾಗಿದೆ. ಈ ಸಂದರ್ಭದಲ್ಲಿ ಮಿಡ್ನೈಟ್ ಮಾಸ್ಗೆ ಯಾವುದೇ ಅಡಚಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ನೈಟ್ ಕರ್ಫ್ಯೂ ವೇಳೆ ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲಾ ಸೇವೆಗೆ ನಿರ್ಬಂಧ ವಿಧಿಸಲಾಗಿದೆ. ಬಸ್ಸು, ರೈಲು, ವಿಮಾನ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ. ಆಟೋ, ಟ್ಯಾಕ್ಸಿ, ಗಳಿಗೆ ಪಿಕಪ್- ಡ್ರಾಪ್ ಗಳಿಗೆ ಅನುಮತಿ ನೀಡಲಾಗಿದೆ. ಗೂಡ್ಸ್ ವಾಹನ, ಖಾಲಿ ವಾಹನ ಗಳು, ಟ್ರಕ್ಸ್ಗಳು ಸಂಚಾರ ಮಾಡಬಹುದು. ರಾತ್ರಿ ಪಾಳಿಯಲ್ಲಿ ಶೇಕಡಾ 50 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಕೆಲಸ ಮಾಡಿಸಬಹುದಾಗಿದ್ದು, ಇವರಿಗೆ ಐಡಿ ಕಾರ್ಡ್ ಕಡ್ಡಾಯವಾಗಿ ನೀಡಬೇಕು. ದೂರದ ಪ್ರಯಾಣ ಮಾಡಲು ಯಾವುದೇ ನಿರ್ಬಂಧ ಇಲ್ಲ. ಅವರು ಎಂದಿನಂತೆ ಪ್ರಯಾಣ ಮಾಡಬಹುದು. ಇನ್ನುಳಿದಂತೆ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ‌ ನಿರ್ಬಂಧವಿಧಿಸಲಾಗಿದೆ.

error: Content is protected !! Not allowed copy content from janadhvani.com