janadhvani

Kannada Online News Paper

ಜಮ್ಮು,ಕಾಶ್ಮೀರ ಡಿಡಿಸಿ‌ ಚುನಾವಣೆ: ಫಾರೂಕ್‌ ಅಬ್ದುಲ್ಲಾ ನೇತೃತ್ವದ ‘ಗುಪ್ಕರ್‌’ ಮುನ್ನಡೆ

ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮೊದಲ ಬಾರಿ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ(ಡಿಡಿಸಿ) ಚುನಾವಣೆಯಲ್ಲಿ ಫಾರೂಕ್‌ ಅಬ್ದುಲ್ಲಾ ನೇತೃತ್ವದ ಗುಪ್ಕರ್‌ ಮೈತ್ರಿಕೂಟ ಭಾರಿ ಮುನ್ನಡೆ ದಾಖಲಿಸಿದೆ.

ಜನಾಂಗೀಯ ಆಧಾರದಲ್ಲಿ ಮತ ವಿಭಜನೆಯಾಗಿರುವುದು ಸ್ಪಷ್ಟವಾಗಿದೆ. ಮೈತ್ರಿಕೂಟವು ಕಾಶ್ಮೀರದಲ್ಲಿ ಮುನ್ನಡೆ ಸಾಧಿಸಿದ್ದರೆ, ಜಮ್ಮು ವಲಯದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. 20 ಜಿಲ್ಲೆಗಳ 280 ಜಿ.ಪಂ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 110ರಲ್ಲಿ ಗುಪ್ಕರ್‌ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಬಿಜೆಪಿ 75 ಮತ್ತು ಕಾಂಗ್ರೆಸ್‌ 26 ಸ್ಥಾನಗಳಲ್ಲಿ ಮುನ್ನಡೆ ಕಾಯ್ದಿಕೊಂಡಿವೆ.ಸ್ವತಂತ್ರ ರಿಗೆ 50, ಅಪ್ನಿ ಪಾರ್ಟಿ 12, ಇತರೆ 5 ಸ್ಥಾನಗಳನ್ನು ಗಿಟ್ಟಿಸಿದೆ. ನ.28ರಿಂದ ಡಿ.19ರ ನಡುವೆ ಎಂಟು ಹಂತಗಳಲ್ಲಿ ಚುನಾವಣೆ ನಡೆದಿತ್ತು.

ಈ ಚುನಾವಣೆಗೆ ಇವಿಎಂ ಬದಲಿಗೆ ಮತಪತ್ರ ಬಳಕೆ ಮಾಡಲಾಗಿತ್ತು. ಹೀಗಾಗಿ ಮಂಗಳವಾರ ತಡರಾತ್ರಿವರೆಗೂ ಎಣಿಕೆ ಕಾರ್ಯ ಮುಂದುವರಿದಿದೆ. 13 ಜಿಲ್ಲಾ ಪರಿಷತ್‌ಗಳಲ್ಲಿ ಗುಪ್ಕರ್‌ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ಸೇರಿ ಅಧಿಕಾರ ಸೂತ್ರ ಹಿಡಿಯುವ ಸಾಧ್ಯತೆ ಇದೆ. ಆರು ಕಡೆ ಬಿಜೆಪಿ ಆಡಳಿತಕ್ಕೆ ಬರುವ ಸಾಧ್ಯತೆ ನಿಚ್ಚಳವಾಗಿದೆ.

ಇನ್ನು 20 ಜಿಲ್ಲೆಗಳ ಪೈಕಿ 6 ಜಿಲ್ಲೆಗಳಲ್ಲಿ ಬಿಜೆಪಿ ಯಾವುದೇ ಪಕ್ಷದ ಸಹಕಾರವಿಲ್ಲದೆ ಸ್ವತಂತ್ರವಾಗಿ ಆಡಳಿತ ನಡೆಸುವಷ್ಟು ಮುನ್ನಡೆ ಸಾಧಿಸಿದ್ದು, ದೋಡಾ, ಉಧಾಂಪುರ್, ಕತುವಾ, ಜಮ್ಮು, ರಿಯಾಸಿ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಬಿಜೆಪಿ ಗದ್ದುಗೆಗೆ ಏರೋದು ಖಚಿತವಾಗಿದೆ.

ಎನ್‌ಐಎ ಕಸ್ಟಡಿಯಲ್ಲಿರುವ ವಹೀದ್‌ಗೆ ಜಯ:
ಉಗ್ರ ನಂಟಿನ ಆರೋಪದಡಿ ರಾಷ್ಟ್ರೀಯ ತನಿಖಾ ಸಂಸ್ಥೆ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಪಿಡಿಪಿ ಯುವ ಘಟಕ ಅಧ್ಯಕ್ಷ ವಹೀದ್‌ ಪಾರಾ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲಾಅಭಿವೃದ್ಧಿ ಪರಿಷತ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರು ಬಿಜೆಪಿಯ ಸಾಜದ್‌ ಅಹ್ಮದ್‌ ರೈನಾ ಅವರನ್ನು ಸೋಲಿಸಿದ್ದಾರೆ.

ಗುಪ್ಕರ್‌ ಮೈತ್ರಿಕೂಟ ಗೆಲುವಿನ ಹೆದ್ದಾರಿ ಕ್ರಮಿಸಿದ್ದರೂ ಫಾರೂಕ್‌ ಅಬ್ದುಲ್ಲಾ, ಉಮರ್‌ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ನಿವಾಸಗಳ ಮುಂದೆ ಯಾವುದೇ ಸಂಭ್ರಮಾಚರಣೆ ಇರಲಿಲ್ಲ. ಈ ಮೂವರು ಮಾಜಿ ಮುಖ್ಯಮಂತ್ರಿಗಳು ತಮ್ಮ ನಿವಾಸಗಳಲ್ಲಿಯೇ ಉಳಿದುಕೊಂಡಿದ್ದರು. ಪ್ರಚಾರಕ್ಕೂ ಈ ನಾಯಕರು ಹೋಗಿರಲಿಲ್ಲ.

error: Content is protected !! Not allowed copy content from janadhvani.com