janadhvani

Kannada Online News Paper

ಚುನಾವಣೆಯಲ್ಲಿ ಸೋಲು: ಯುಡಿಎಫ್ ನಲ್ಲಿ ಭಿನ್ನಮತ ಸ್ಫೋಟ

ತಿರುವನಂತಪುರಂ: ಕೇರಳದ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಸಾಧ್ಯವಾಗದೇ ಹೋಗಿರುವುದರಿಂದ ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್‌)ದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

ಯುಡಿಎಫ್‌ನ ಪ್ರಮುಖ ಪಕ್ಷವಾಗಿರುವ ಇಂಡಿಯನ್‌ ಮುಸ್ಲಿಂ ಲೀಗ್‌, ಸೋಲಿನ ಕುರಿತು ಕಾಂಗ್ರೆಸ್‌ ಮತ್ತು ಯುಡಿಎಫ್‌ ಆತ್ಮವಿಮರ್ಶೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ರೆವಲ್ಯೂಶನರಿ ಸೋಷಿಯಲಿಸ್ಟ್‌ ಪಾರ್ಟಿ ಮುಖಂಡ ಶಿಬು ಬೇಬಿ ಜಾನ್‌ ಸಹ, “ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯುಡಿಎಫ್‌ ವಿಫಲವಾಗಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಂತೂ ಆಂತರಿಕ ಭಿನ್ನಾಭಿಪ್ರಾಯ ಉಲ್ಬಣಗೊಂಡಿದೆ. ಸೋಲಿನ ಕುರಿತು ಪರಿಸ್ಪರ ದೋಷಾರೋಪಕ್ಕೆ ಇಳಿದಿರುವ ಪಕ್ಷ ಮುಖಂಡರು, ಕಾಂಗ್ರೆಸ್‌ ಜಿಲ್ಲಾಘಟಕಗಳ ವಿಸರ್ಜನೆಗೆ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಜಿಲ್ಲಾಘಟಕಗಳ ಮುಖಂಡರು ರಾಜ್ಯ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಕೆಪಿಸಿಸಿ ವಿಸರ್ಜನೆ ಮಾಡಬೇಕೆಂದು ಆಗ್ರಹಿಸಿ ಕೋಯಿಕ್ಕೋಡ್‌ ಜಿಲ್ಲಾಘಟಕದ ಮುಖಂಡರು ಪೋಸ್ಟರ್‌ ಚಳವಳಿ ಆರಂಭಿಸಿದ್ದಾರೆ. ಇಂತದ್ದೇ ಪೋಸ್ಟರ್‌ಗಳು ಜಿಲ್ಲಾ ಘಟಕಗಳ ವಿರುದ್ಧವೂ ರಾರಾಜಿಸಿವೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದ ಸದಸ್ಯರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಸಹ ಕೇರಳದವರು. ಹೀಗಿದ್ದರೂ ಯುಡಿಎಫ್‌ ತನ್ನ ಭದ್ರಕೋಟೆಯಾಗಿದ್ದ ಪ್ರದೇಶಗಳಲ್ಲಿಯೇ ನೆಲೆ ಕಳೆದುಕೊಂಡಿರುವುದು ಕಾಂಗ್ರೆಸ್‌ಗೆ ತಳಮಳ ಸೃಷ್ಟಿಸಿದೆ.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸಲಿರುವ ಕೇರಳದಲ್ಲಿ ಬಿಜೆಪಿ ನಿಧಾನವಾಗಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸತೊಡಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಸಾಧ್ಯವಾಗದಿದ್ದರೂ ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದೆ. ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ನಡುವೆ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಪೈಪೋಟಿಯನ್ನು ಬದಲಾಯಿಸಲು
ಸ್ಥಳೀಯ ಸಂಸ್ಥೆ ಚುನಾವಣೆ ಮೂಲಕ ಬಿಜೆಪಿ ಈ ಬಾರಿ ದೊಡ್ಡ ಪ್ರಯತ್ನವನ್ನೇ ಮಾಡಿತು. ಆದರೆ, ತಾನು ಅಂದುಕೊಂಡಂತೆ ಮ್ಯಾಜಿಕ್‌ ಸೃಷ್ಟಿಸಲು ಆ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಪುನಃ ಆಡಳಿತಾರೂಢ ಎಲ್‌ಡಿಎಫ್‌ ಪ್ರಾಬಲ್ಯ ಮೆರೆದಿದೆ.

error: Content is protected !! Not allowed copy content from janadhvani.com