janadhvani

Kannada Online News Paper

ಕೇರಳ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್ಡಿಎಫ್ ಜಯಭೇರಿ

ತಿರುವನಂತಪುರಂ(ಡಿ. 16): ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಎಲ್ಡಿಎಫ್ ಮೈತ್ರಿಕೂಟ ಮೇಲುಗೈ ಸಾಧಿಸಿದೆ. ಈಗ ಬಂದಿರುವ ಇತ್ತೀಚಿನ ಮಾಹಿತಿ ಪ್ರಕಾರ ಎಲ್ಡಿಎಫ್ ಮೈತ್ರಿಕೂಟ 482 ಗ್ರಾ.ಪಂ., 103 ಬ್ಲಾಕ್ ಪಂಚಾಯತ್, 41 ಪುರಸಭೆ, 14 ಜಿಲ್ಲಾ ಪಂಚಾಯತ್ ಮತ್ತು 3 ನಗರಪಾಲಿಕೆಗಳಲ್ಲಿ ಮುನ್ನಡೆ ಸಾಧಿಸಿದೆ.

ಕಾಂಗ್ರೆಸ್ ಪಕ್ಷ ನೇತೃತ್ವದ ಯುಡಿಎಫ್ ಮೈತ್ರಿಕೂಟ 383 ಗ್ರಾಮ ಪಂಚಾಯತ್, 48 ಬ್ಲಾಕ್ ಪಂಚಾಯತ್, 39 ನಗರಸಭೆ, 4 ಜಿ.ಪಂ. ಮತ್ತು 3 ನಗರಪಾಲಿಕೆಗಳಲ್ಲಿ ಮುನ್ನಡೆ ಹೊಂದಿದೆ. ಇನ್ನು, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 24 ಗ್ರಾಮ ಪಂಚಾಯತಿ ಮತ್ತು 2 ಪುರಸಭೆಗಳಲ್ಲಿ ಜಯಭೇರಿ ಭಾರಿಸುತ್ತಿದೆ. ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಮೂರೂ ಮೈತ್ರಿಕೂಟಗಳ ಸಾಧನೆಯಲ್ಲಿ ಅಷ್ಟೇನೂ ದೊಡ್ಡ ವ್ಯತ್ಯಾಸವಾಗಿಲ್ಲ.

ಗ್ರಾಮ ಪಂಚಾಯತಿಗಳಲ್ಲಿ ಎಲ್ಡಿಎಫ್ ಬಲ ಸ್ವಲ್ಪ ಕಡಿಮೆ ಆಗಿದ್ದರೂ ಒಟ್ಟಾರೆಯಾಗಿ ಅದು ಕಳೆದ ಬಾರಿಗಿಂತ ಹೆಚ್ಚು ವಾರ್ಡ್ಗಳನ್ನ ಗೆದ್ದಿದೆ. ಯುಡಿಎಫ್ ಬಹುತೇಕ ಯಥಾಸ್ಥಿತಿ ಹೊಂದಿದೆ. ಬಿಜೆಪಿಯ ಬಲ ತುಸು ಹೆಚ್ಚಾಗಿದೆ.

ಡಿಸೆಂಬರ್ 8, 10 ಮತ್ತು 14ರಂದು ಮೂರು ಹಂತಗಳಲ್ಲಿ ಕೇರಳದ 1,200 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ 6 ನಗರಪಾಲಿಕೆಗಳು, 14 ಜಿಲ್ಲಾ ಪಂಚಾಯತ್, 86 ಪುರಸಭೆ (ಮುನಿಸಿಪಾಲಿಟಿ), 103 ಬ್ಲಾಕ್ ಪಂಚಾಯತ್ ಮತ್ತು 941 ಗ್ರಾಮ ಪಂಚಾಯತ್ಗಳಿಂದ ಒಟ್ಟು 21,893 ವಾರ್ಡ್ಗಳಿಗೆ ಮತದಾನವಾಗಿತ್ತು. ಸರಾಸರಿ ಮತದಾನದ ಪ್ರಮಾಣ ಸುಮಾರು ಶೇ. 75 ಮೇಲ್ಪಟ್ಟು ಇತ್ತು.

ಅಚ್ಚರಿಯ ಫಲಿತಾಂಶದಲ್ಲಿ ಎರ್ನಾಕುಲಂನ ನಗರಪಾಲಿಕೆ ಚುನಾವಣೆಯಲ್ಲಿ ಯುಪಿಎಯ ಮೇಯರ್ ಅಭ್ಯರ್ಥಿ ಕೆಎನ್ ವೇಣುಗೋಪಾಲ್ ಅವರು ಬಿಜೆಪಿ ಅಭ್ಯರ್ಥಿ ಎದುರು ಕೇವಲ ವೋಟ್ನಿಂದ ಪರಾಭವಗೊಂಡಿದ್ದಾರೆ.

ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಎಲ್ಡಿಎಫ್ ಮುನ್ನಡೆ ಸಾಧಿಸಿದರೂ ಯುಡಿಎಫ್ ಅನ್ನು ಹಿಂದಿಕ್ಕಿ ಬಿಜೆಪಿ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಒಟ್ಟಾರೆಯಾಗಿ ಬಿಜೆಪಿ ಹಿಂದಿಗಿಂತಲೂ ಹೆಚ್ಚು ಸ್ಥಾನಗಳನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೂ ಈ ಬಾರಿ ಅದು ನಿರೀಕ್ಷಿಸಿದಷ್ಟು ಸಂಖ್ಯೆಯಲ್ಲಿ ಗೆಲುವು ದಕ್ಕಿಲ್ಲ.

ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷ ನೇತೃತ್ವದ ಆಡಳಿತಾರೂಢ ಎಲ್ಡಿಎಫ್ ಸರ್ಕಾರ ಕೋವಿಡ್ ಸಂಕಷ್ಟದಲ್ಲಿ ಮಾಡಿದ ಜನಪರ ಚಟುವಟಿಕೆಗಳು ಅದರ ಕೈಹಿಡಿದಿರುವಂತೆ ಭಾಸವಾಗುತ್ತಿದೆ. ಸರ್ಕಾರದ ಭ್ರಷ್ಟಾಚಾರವನ್ನು ಎತ್ತಿತೋರಿಸಿ ಜನರ ಮುಂದಿಡುವ ಯುಡಿಎಫ್ನ ಪ್ರಯತ್ನಕ್ಕೆ ನಿರೀಕ್ಷಿತ ಜನಸ್ಪಂದನೆ ಸಿಕ್ಕಿಲ್ಲ. ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಚುನಾವಣೆಗೆ ಇಳಿದಿದ್ದ ಬಿಜೆಪಿಗೂ ಅದು ಅಪೇಕ್ಷಿಸಿದಷ್ಟು ಜನಬೆಂಬಲ ದೊರಕಿಲ್ಲ ಎಂಬುದು ಈ ಚುನಾವಣಾ ಫಲಿತಾಂಶಗಳು ಹೇಳುತ್ತಿವೆ.

ಕೇರಳ ಸ್ಥಳೀಯ ಸಂಸ್ಥೆ ಇತ್ತೀಚಿನ ಫಲಿತಾಂಶದ ವಿವರ:
ಗ್ರಾಮ ಪಂಚಾಯತ್‌
ಒಟ್ಟು -941
ಎಲ್‌ಡಿಎಫ್‌-514
ಯುಡಿಎಫ್‌-375
ಇತರರು – 29
ಎನ್‌ಡಿಎ – 23

ಮಹಾನಗರ ಪಾಲಿಕೆ
ಒಟ್ಟು – 6
ಎಲ್‌ಡಿಎಫ್‌ – 5 (ತಿರುವನಂತಪುರಂ, ಕೊಚ್ಚಿನ್‌, ಕೊಲ್ಲಂ, ತ್ರಿಶೂರ್‌, ಕೋಳಿಕ್ಕೋಡ್‌)
ಯುಡಿಎಫ್‌ – 1 (ಕಣ್ಣೂರು)

ಮುನ್ಸಿಪಾಲಿಟಿ (ನಗರ ಸಭೆ, ಪುರಸಭೆ)
ಒಟ್ಟು -86
ಯುಡಿಎಫ್‌-45
ಎಲ್‌ಡಿಎಫ್‌-35
ಇತರ – 4
ಎನ್‌ಡಿಎ -2
ಜಿಲ್ಲಾ ಪಂಚಾಯತ್‌
ಒಟ್ಟು -14
ಎಲ್‌ಡಿಎಫ್‌-11
ಯುಡಿಎಫ್‌-3
ತಾಲೂಕು ಪಂಚಾಯತ್‌
ಒಟ್ಟು-152

ಎಲ್‌ಡಿಎಫ್‌-108
ಯುಡಿಎಫ್‌-44

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ತಿಂಗಳುಗಳ ಮುಂಚೆಯೇ ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶ ಪ್ರಕಟವಾಗುತ್ತಿದ್ದು, ಮತದಾರರ ಮನಸ್ಥಿತಿಯ ಯಾವ ಪಕ್ಷದ ಪರವಿದೆ ಎಂಬುದು ತಿಳಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಯುಡಿಎಫ್ ಲಾಭಗಳನ್ನು ಕಾಣುವ ನಿರೀಕ್ಷೆಯಲ್ಲಿದ್ದರೆ, ಇಲ್ಲಿಯವರೆಗೆ ಕೇಸರಿ ಪಕ್ಷವನ್ನು ಮತದಾರ ದೂರವಿಟ್ಟಿರುವ ರಾಜ್ಯದಲ್ಲಿ ಲಾಭ ಗಳಿಸಬಹುದೇ ಎಂದು ಎಲ್ಲರ ಕಣ್ಣುಗಳು ಇದೀಗ ಬಿಜೆಪಿಯತ್ತ ನೆಟ್ಟಿವೆ. ಹೈದರಾಬಾದ್ ಸ್ಥಳೀಯ ಚುನಾವಣೆಗಳಲ್ಲಿ ಇತ್ತೀಚಿನ ಭರ್ಜರಿ ಲಾಭ ಮಾಡಿಕೊಂಡಿರುವ ಧೈರ್ಯದಲ್ಲಿರುವ ಬಿಜೆಪಿ ಕೇರಳದಲ್ಲೂ ತನ್ನ ಪ್ರಭುತ್ವ ಸ್ಥಾಪಿಸುವ ಗುರಿಯನ್ನಿಟ್ಟುಕೊಂಡಿದೆ.

ಆಡಳಿತಾರೂಢ ಎಡ ಪ್ರಜಾಪ್ರಭುತ್ವ ರಂಗವು ಅದ್ಭುತ ಗೆಲುವು ಸಾಧಿಸುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಎಡಪಂಥೀಯರು ಅಪ್ರತಿಮ ಗೆಲುವು ಸಾಧಿಸಲಿದ್ದಾರೆ. ಇಲ್ಲಿಯವರೆಗೆ ಮತ ಚಲಾಯಿಸಿದವರು ನಮಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ. ಕೇರಳವನ್ನು ನಾಶಮಾಡಲು ಪ್ರಯತ್ನಿಸುವವರಿಗೆ ಇದು ಮತದಾರ ಕೊಟ್ಟ ಸೂಕ್ತವಾದ ಉತ್ತರವಾಗಿದೆ ಎಂದು ಅವರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ಮಧ್ಯೆ ಮತದಾನವು 3 ಹಂತಗಳಲ್ಲಿ ನಡೆದಿತ್ತು. ಕೊನೆಯದಾಗಿ 4 ಉತ್ತರದ ಜಿಲ್ಲೆಗಳಲ್ಲಿ ಸೋಮವಾರ (ಡಿಸೆಂಬರ್ 14) ಮತದಾನ ನಡೆದಿತ್ತು. ರಾಜ್ಯ ಚುನಾವಣಾ ಆಯೋಗದ ಪ್ರಕಾರ, ಕೋಚಿಕೋಡ್ ಜಿಲ್ಲೆಯಲ್ಲಿ ಶೇ.78.98 ರಷ್ಟು ಅತಿ ಹೆಚ್ಚು ಮತದಾನವಾಗಿದೆ, ನಂತರದ ಸ್ಥಾನದಲ್ಲಿ ಮಲಪ್ಪುರಂ ಶೇ.78.86 ಮತ್ತು ಕಣ್ಣೂರು ಶೇ.77.54, ಕಾಸರಗೋಡಿನಲ್ಲಿ ಅತಿ ಕಡಿಮೆ ಶೇ.77.14 ಮತದಾನ ಪ್ರಮಾಣ ದಾಖಲಾಗಿತ್ತು.

error: Content is protected !! Not allowed copy content from janadhvani.com