ನವದೆಹಲಿ, ಡಿ 13: ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಮತ್ತು ಪಕ್ಷದ ಇತರ ಶಾಸಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಶಾಸಕರಾದ ಋತುರಾಜ್, ರಾಘವ್ ಚಡ್ಡಾ, ಕುಲದೀಪ್ ಕುಮಾರ್ ಮತ್ತು ಸಂಜೀವ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಎಎಪಿ ಟ್ವೀಟ್ ನಲ್ಲಿ ತಿಳಿಸಿದೆ.
ಉತ್ತರ ಎಂಸಿಡಿ ಯಿಂದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಅಮಿತ್ ಶಾ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರಾಘವ್ ಚಡ್ಡಾ ಮತ್ತು ಇತರ ಎಎಪಿ ಶಾಸಕರನ್ನು ಬಂಧಿಸಲಾಗಿದೆ.
ದೆಹಲಿ ಮಹಾನಗರ ಪಾಲಿಕೆಯಲ್ಲಿ ₹2,400 ಕೋಟಿಗೂ ಅಧಿಕ ಹಣ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಎದುರು ಧರಣಿ ನಡೆಸುವುದಾಗಿ ಆಮ್ ಆದ್ಮಿ ಪಕ್ಷ ಶನಿವಾರ ತಿಳಿಸಿತ್ತು.
ಬಿಜೆಪಿ ಆಡಳಿತವಿರುವ ಪುರಸಭೆ ನಿಗಮಗಳ ನಾಯಕರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಹೊರಗೆ ಧರಣಿ ಕುಳಿತಿರುವ ಸಮಯದಲ್ಲೇ ಎಎಪಿ ಈ ನಿರ್ಧಾರ ಕೈಗೊಂಡಿದೆ.