ಸುಜಯ್ ಕುಮಾರ್ ಮುಂಬೈ (ಹುಟ್ಟೂರು ಬಂಟ್ವಾಳ ತಾಲೂಕಿನ ಕಕ್ಕೆಪದವು) ಇವರು ಸೌದಿ ಅರೇಬಿಯಾದ ದಮ್ಮಾಮ್, ರಸ್ತನ್ನೂರ ಎಂಬಲ್ಲಿ ಕೆಲಸ ಮಾಡುವವರಾಗಿದ್ದಾರೆ. ಅವರು ಸ್ನಾನದ ಕೋಣೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿನ ಹೀಟರ್ ಇದರ ಪೈಪ್ ಒಡೆದು ಅದರಲ್ಲಿದ್ದ ಕುದಿಯುವ ನೀರು ಇವರ ಮೇಲೆ ಬಿದ್ದ ಪರಿಣಾಮವಾಗಿ ದೇಹ ಸುಟ್ಟು ದಮ್ಮಾಮಿನ ಸೆಂಟ್ರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಸುಜಯ್ ಕುಮಾರ್ ರವರ ವಿಷಯ ತಿಳಿದ ಕೂಡಲೇ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ಕಾರ್ಯಕರ್ತರಾದ ಬಶೀರ್ ಮದನಿ ನೆಲ್ಲಿಪಳಿಕೆ, ಇಂತಿಯಾಝ್ ಕಕ್ಕೆಪದವು ರವರು ಆಸ್ಪತ್ರೆಗೆ ಭೇಟಿಯಾಗಿ ರೋಗಿಗೆ ಅತ್ಯಾವಶ್ಯಕವಾಗಿ ಬೇಕಾದ ಎಲ್ಲಾ ಸಾಮಗ್ರಿಗಳನ್ನು ನೀಡಿ ಸಾಂತ್ವನ ಮಾಡಿದರು.
ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟು ರವರೂ ಆಸ್ಪತ್ರೆಗೆ ಭೇಟಿಯಾಗಿ ಅವರಿಗೆ ಬೇಕಾದ ಮಾರ್ಗದರ್ಶನಗಳನ್ನು ನೀಡಿ ಧೈರ್ಯವನ್ನು ತುಂಬಿದರು.
ಸುಜಯ್ ಕುಮಾರ್ ರವರನ್ನು ಸ್ವಂತ ತಮ್ಮನಂತೆ ನೋಡಿಕೊಂಡ ಕೆಸಿಎಫ್ ಸಂಘಟನೆಯ ಕಾರ್ಯಕರ್ತರನ್ನು ದೇವರು ಅನುಗ್ರಹಿಸಲಿ ಎಂಬ ಪ್ರಾರ್ಥನೆಯೊಂದಿಗೆ ಸುಜಯ್ ಅವರ ಕುಟುಂಬದವರು ಕೆಸಿಎಫ್ ನೇತಾರರಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಸೂಚಿಸಿದರು.