ಬೆಂಗಳೂರು: ಸಿಎಂ ಬದಲಾವಣೆ ಆಗುತ್ತಾ ಇಲ್ವಾ ಎಂಬ ಗೊಂದಲಕ್ಕೆ ಒಂದು ಹಂತದ ತೆರೆ ಬಿದ್ದಿದೆ. ಹೌದು, ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವುದಿಲ್ಲ ಎಂದು ಬಿಜೆಪಿ ಪಕ್ಷ ಅಧಿಕೃತ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧವಾಗಿ ನೇರಾನೇರ ವಾಗ್ದಾಳಿ ನಡೆಸುತ್ತಲೇ ಬಂದಿರುವ ಬಿಜಾಪುರ ಬಿಜೆಪಿ ಶಾಸಕ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ “ಬಿಎಸ್ವೈ ಹೆಚ್ಚು ದಿನ ಅಧಿಕಾರಿದಲ್ಲಿ ಮುಂದುವರೆಯುವುದಿಲ್ಲ” ಎಂದು ವಾಗ್ದಾಳಿ ನಡೆಸುವ ಮೂಲಕ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ವಿಚಾರ ಬಿಜೆಪಿ ನಾಯಕರಿಗೆ ಇರಿಸು ಮುರಿಸಿಗೆ ಕಾರಣವಾಗಿದ್ದು, ಈ ಕುರಿತು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, “ಅಶಿಸ್ತು ಪ್ರದರ್ಶಿಸುವವರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ” ಎಂದು ಯತ್ನಾಳ್ ಅವರಿಗೆ ನೇರಾನೇರ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಬಿಜೆಪಿ ಅಧಿಕೃತ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದಿದೆ. ಇನ್ನು ಬರುವ ಮೂರು ವರ್ಷಗಳ ಕಾಲ ಬಿಎಸ್ವೈ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದಿದೆ.
ಯತ್ನಾಳ್ ಹೇಳಿಕೆ ಬೆನ್ನಲ್ಲೇ ಬಿಎಸ್ವೈ ಆಪ್ತರು ತಿರುಗಿ ಬಿದ್ದಿದ್ದರು. ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಕೃಷಿ ಸಚಿವ ಬಿ.ಸಿ ಪಾಟೀಲ್ ಸೇರಿದಂತೆ ಹಲವರು ಆಗ್ರಹ ಮಾಡಿದ್ದರು.
ಸೋಮವಾರ ರಾತ್ರಿ ವಿಜಯಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಬಿಎಸ್ ಯಡಿಯೂರಪ್ಪಹೆಚ್ಚು ದಿನ ಸಿಎಂ ಆಗಿ ಉಳಿಯುವುದಿಲ್ಲ ಎಂದಿದ್ದರು. ಅಲ್ಲದೆ ಹೈಕಮಾಂಡ್ ಕೂಡಾ ಬಿಎಸ್ವೈ ಬಗ್ಗೆ ಮುನಿಸಿಕೊಂಡಿದ್ದಾರೆ ಎಂದಿದ್ದರು.