janadhvani

Kannada Online News Paper

ಹೆಲ್ಮಟ್ ರಹಿತ ಚಾಲನೆ: ಮೂರು ತಿಂಗಳು ಚಾಲನಾ ಪರವಾನಗಿ ರದ್ದು

ಬೆಂಗಳೂರು: ರಸ್ತೆ ಕಾನೂನು ಉಲ್ಲಂಘನೆಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸಂಚಾರಿ ಇಲಾಖೆ, ರಸ್ತೆಯಲ್ಲಿ ವಾಹನ ಚಲಾಯಿಸುವಾದ ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಇದ್ದಲ್ಲಿ ಅವರ ಡಿಎಲ್ (ವಾಹನ ಚಾಲನಾ ಪರವಾನಗಿ) ಮೂರು ತಿಂಗಳ ಕಾಲ ಅಮಾನತುಗಳಿಸುವ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ರಾಜ್ಯದಲ್ಲಿ ಹೆಲ್ಮೆಟ್ ರಹಿತ ವಾಹನ ಚಲಾವಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಅಪಾರ ಸಂಖ್ಯೆಯ ಪ್ರಕರಣಗಳು ದಾಖಲಾಗುತ್ತಿವೆ. ಇದೇ ಕಾರಣಕ್ಕೆ ಸಂಚಾರಿ ಇಲಾಖೆ ಇಂತಹ ಮಹತ್ವದ ನಿರ್ಧಾರಕ್ಕೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೋಟಾರು ವಾಹನ ಕಾಯ್ದೆ 2019ರ ಅನ್ವಯ ಹೆಲ್ಮೆಟ್ ರಹಿತ ವಾಹನ ಚಲಾವಣೆಗೆ 1000 ರೂ.ದಂಡ ಮತ್ತು ಮೂರು ತಿಂಗಳುಗಳ ಕಾಲ ಅವರ ಡಿಎಲ್ ಅನ್ನು ಅಮಾನತುಗೊಳಿಸಬಹುದು. ಆದರೆ, ರಾಜ್ಯದಲ್ಲಿ ದಂಡವನ್ನು 500ಕ್ಕೆ ಇಳಿಸಲಾಗಿತ್ತಾದರೂ ಡಿಎಲ್ ಅಮಾನತುಗೊಳಿಸಲು ಇಲಾಖೆ ಒಪ್ಪಿಗೆ ಸೂಚಿಸಿರಲಿಲ್ಲ. ಆದರೆ, ಇದೀಗ ಹೆಲ್ಮೆಟ್ ರಹಿತ ವಾಹನ ಚಲಾವಣೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆ ಮುಂದಾಗಿದೆ ಎನ್ನಲಾಗುತ್ತಿದೆ.

ಈ ವರ್ಷ ಸೆಪ್ಟೆಂಬರ್ ಅಂತ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಬರೋಬ್ಬರಿ 20.7 ಲಕ್ಷ ಹೆಲ್ಮೆಟ್ ರಹಿತ ವಾಹನ ಚಲಾವಣೆ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಮಾಹಿತಿ ನೀಡಿರುವ ಸಂಚಾರಿ ಇಲಾಖೆ ಅಧಿಕಾರಿಯೊಬ್ಬರು, “ರಸ್ತೆ ಸಂಚಾರಿ ನಿಯಮ ಪಾಲನೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಒಂದು ಸಮಿತಿಯನ್ನು ನೇಮಕ ಮಾಡಿದೆ. ರಾಜ್ಯದ ಅಧಿಕಾರಿಗಳ ಜೊತೆಯಲ್ಲಿ ಅಕ್ಟೋಬರ್ 14 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದ ಈ ಸಮಿತಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ” ಎಂದು ತಿಳಿಸಿದ್ದಾರೆ.