ಬೆಂಗಳೂರು: ಅ.18:ವಿಶ್ವ ಬ್ಯಾಂಕ್ ವರದಿಯ ಪ್ರಕಾರ ಮುಂದಿನ ವರ್ಷ ದೇಶದ ಆರ್ಥಿಕತೆ ಹಾದಿಗೆ ಬರಲಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದ ಗೌಡ ಹೇಳಿದರು.
ಕೋವಿಡ್ ಸಮಯದಲ್ಲಿ ದೇಶದಲ್ಲಿ ಶೇಕಡ 40 ರಷ್ಟು ಹೆಚ್ಚು ರಾಸಾಯನಿಕ ಗೊಬ್ಬರಗಳ ಮಾರಾಟವಾಗಿದ್ದು, ಜನರು ಕೃಷಿಯತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲೂ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಂತಹ ಕಾರ್ಯಕ್ಕೆ ಚಾಲನೆ ಸಿಗುತ್ತಿರುವುದು ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಪುನಶ್ಚೇತಗೊಳ್ಳುವತ್ತ ದಾಪುಗಾಲು ಹಾಕುತ್ತಿರುವುದನ್ನು ತೋರಿಸುತ್ತವೆ.
ಯಲಹಂಕದಲ್ಲಿ ಸಾಯಿಕಲ್ಯಾಣ್ ವಾಟರ್ ಎಡ್ಜ್ ವಸತಿ ಸಮುಚ್ಚಯದ ಭೂಮಿಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊರೋನಾ ಕಾಲದಲ್ಲಿ ಜಾಗತಿಕವಾಗಿ ಆರ್ಥಿಕತೆ ಕುಸಿತ ಕಂಡಿದೆ. ನಮ್ಮದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಆರ್ಥಿಕತೆ ಬೆಳೆಯುತ್ತಿರುವ ದೇಶ. ನಮ್ಮ ದೇಶದ ಆರ್ಥಿಕತೆಗೂ ಕೂಡಾ ಬಹಳಷ್ಟು ಆಘಾತ ಉಂಟಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಯೋಜನೆ, 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಆರ್ಥಿಕತೆಗೆ ಒಳ್ಳೆಯ ಬಲವನ್ನು ನೀಡಿದೆ. ಮೊನ್ನೆ ಬಿಡುಗಡೆಯಾದ ವಿಶ್ವಬ್ಯಾಂಕ್ ವರದಿ ಪ್ರಕಾರ ಮುಂದಿನ ವರ್ಷದಲ್ಲಿ ಶೇಕಡ 8 ರಷ್ಟು ಜಿಡಿಪಿ ವೃದ್ದಿ ಆಗುವ ಮೂಲಕ ಆರ್ಥಿಕತೆಯಲ್ಲಿ ಚೀನಾ ದೇಶವನ್ನು ಭಾರತ ದೇಶ ಹಿಂದಿಕ್ಕಲಿದೆ ಎಂದು ತಿಳಿಸಿದರು.