janadhvani

Kannada Online News Paper

ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಶಾಲಾ ಕಾಲೇಜು ತೆರೆಯದಿರಲು ನಿರ್ಧಾರ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೆಪ್ಟೆಂಬರ್ 21ರಿಂದ ಶಾಲೆ ಆರಂಭಿಸಲಾಗುವುದು ಎಂಬ ಆದೇಶವನ್ನು ಸರ್ಕಾರ ಇಂದು ಹಿಂಪಡೆದಿದೆ.

ಅಲ್ಲದೇ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಶಾಲಾ ಕಾಲೇಜು ತೆರೆಯದಿರಲು ನಿರ್ಧಾರ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಪ್ರಕಟಣೆ ಹೊರಡಿಸಿದ್ದಾರೆ.

ನಿನ್ನೆ ಮೈಸೂರಿನಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸೆಪ್ಟೆಂಬರ್ 21 ರಿಂದ ಶಾಲೆ ಪ್ರಾರಂಭಿಸಲಾಗುವುದು. ಆದರೆ, ತರಗತಿಗಳು ನಡೆಯುವುದಿಲ್ಲ. ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಉಳಿದ ಕಡೆಗಳಲ್ಲಿ 9ನೇ ತರಗತಿಯಿಂದ 12ನೇ ತರಗತಿಯವರೆಗೆ ವಿಶೇಷ ತರಗತಿಗಳು ಮಾತ್ರ ನಡೆಯುತ್ತವೆ. ಶಾಲೆಗೆ ಬರುವ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ತರಬೇಕು. ಈ ವೇಳೆ ದಾಖಲಾತಿ ಪ್ರಕ್ರಿಯೆ ನಡೆಯಲಿದ್ದು, ಶಿಕ್ಷಕರ ಹಾಜರಾತಿ ಕಡ್ಡಾಯ ಎಂದು ತಿಳಿಸಿದ್ದರು.

ಆದರೆ, ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಿಗೆ ಯಾಗುತ್ತಿದ್ದು, ದಿನವೊಂದಕ್ಕೆ ಮೂರು ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ ಜನ ಸಾಮಾನ್ಯರು ಸೇರಿದಂತೆ ಅನೇಕ ರಾಜಕಾರಣಿಗಳು ಕೂಡ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಲಾ-ಕಾಲೇಜು ತೆರೆಯದಿರುವುದು ಉತ್ತಮ. ಆದ ಕಾರಣ ಪರಿಸ್ಥಿತಿ ಅವಲೋಕನೆಯ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೊರೋನಾ ಕಾಣಿಸಿಕೊಂಡು ಲಾಕ್ಡೌನ್ ಜಾರಿಯಾದ ನಂತರ ಇದುವರೆಗೂ ಶಾಲಾ-ಕಾಲೇಜುಗಳು ಆರಂಭಗೊಂಡಿಲ್ಲ. ಸೆ.30ರೊಳಗೆ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಸಬೇಕಿದೆ. ಅಲ್ಲದೇ, ಈ ಹಿನ್ನೆಲೆಯಲ್ಲಿ ದಾಖಲಾತಿ ಪ್ರಕ್ರಿಯೆಗಾಗಿ ಶಾಲೆ ಆರಂಭಿಸುವ ಸೂಚನೆ ನೀಡಲಾಗಿತ್ತು.

ಸೋಂಕು ಕಡಿಮೆಯಾಗದ ಹಿನ್ನೆಲೆ ಸಾಕಷ್ಟು ಪೋಷಕರು ಕೂಡ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕಿದ್ದರು. ಶಿಕ್ಷಕ ವರ್ಗದಲ್ಲಿಯೂ ಈ ಭಯ ಮೂಡಿತು. ಈ ದೃಷ್ಟಿಕೋನದಿಂದ ಈ ಆದೇಶ ಹೊರಬಿದ್ದಿರುವ ಸಾಧ್ಯತೆ ಇದೆ.

error: Content is protected !! Not allowed copy content from janadhvani.com