janadhvani

Kannada Online News Paper

ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ

ತೊಕ್ಕೊಟು: ಸರಕಾರಿ ಆಸ್ಪತ್ರೆ ಬಲಪಡಿಸಿ, ಖಾಸಗೀ ಆಸ್ಪತ್ರೆ ‌ನಿಯಂತ್ರಿಸಿ ಎಂಬ ಡಿವೈಎಫ್ಐ ಅಭಿಯಾನದ ಭಾಗವಾಗಿ ಇಂದು ಸಂಜೆ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜ್ ಕೊಡಿ ಮತ್ತು ಎಲ್ಲಾ ಕೊರೊನಾ ಸೋಂಕಿತರಿಗೆ ಉಚಿತ ಗುಣಮಟ್ಟದ ಚಿಕಿತ್ಸೆ ನೀಡಿ ಎಂದು ಆಗ್ರಹಿಸಿ ಪ್ರತಿಭಟನಾ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಜಿಲ್ಲೆಯ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಯ ಹೆಸರಿನಲ್ಲಿ ರೋಗಿಗಳಿಂದ ಲೂಟಿ ಮಾಡುತ್ತಿದೆ. ಈ ಬಗ್ಗೆ ಧ್ವನಿ ಎತ್ತಬೇಕಿದ್ದ ಜಿಲ್ಲಾಡಳಿತ ಮೌನವಾಗಿದೆ. ಇನ್ನು ಗ್ರಾಮಾಂತರ ಪ್ರದೇಶದಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆ ಇದೆ. ಖಾಸಗಿ ಕಾಲೇಜಿನಲ್ಲಿ ಓದಿದ ವೈದ್ಯಕೀಯ ವಿದ್ಯಾರ್ಥಿಗಳು ಅರವತ್ತು ಸಾವಿರ ಸಂಬಳ ತಿಂಗಳಿಗೆ ಕೊಟ್ಟರೂ ಇಲ್ಲಿ ಕೆಲಸಕ್ಕೆ ಬರುತ್ತಿಲ್ಲ ಎಂದು ಜಿಲ್ಲೆಯ ವೈದಾಧಿಕಾರಿಗಳೇ ಹೇಳುತ್ತಾರೆ.

ಇಲ್ಲಿ ಖಾಸಗಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಅನುಮತಿ ಕೊಟ್ಟ ಸರ್ಕಾರ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಕೊಟ್ಟಿದ್ದರೆ ಬಡವರ ಮಕ್ಕಳು ವೈದ್ಯರಾಗಿ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಸರ್ಕಾರಕ್ಕೆ ಅದು ಬೇಕಿಲ್ಲ. ಅವರು ಶ್ರೀಮಂತ ಮೆಡಿಕಲ್ ಕಾಲೇಜು ಧಣಿಗಳ ಹಿತ ಕಾಯುವಲ್ಲಿಯೇ ಬ್ಯುಸಿಯಾಗಿದ್ದಾರೆ ಎಂದರು.

ಸಭೆಯನ್ನುದ್ದೇಶಿಸಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್, ಜಿಲ್ಲಾ ಮುಖಂಡ ನವೀನ್ ಬೊಲ್ಪುಗುಡ್ಡೆ ಮಾತನಾಡಿದರು. ಸಭೆಯಲ್ಲಿ ಡಿವೈಎಫ್ಐ ಕಾರ್ಯದರ್ಶಿ ಸುನಿಲ್ ತೇವುಲ, ಉಪಾಧ್ಯಕ್ಷ ರಝಾಕ್ ಮೊಂಟೆಪದವು, ನಾಯಕರಾದ ನಿತಿನ್ ಕುತ್ತಾರ್, ಜೀವನ್ ರಾಜ್ ಕುತ್ತಾರ್, ಅಶ್ರಫ್ ಹರೇಕಳ, ಸಂತೋಷ್ ಶೆಟ್ಟಿ ಪಿಲಾರ್, ಆಶ್ಫಾಕ್ ಅಳೇಕಲ, ಅಶ್ವಿದ್ ಮುಕ್ಕಚ್ಚೇರಿ, ರಝಾಕ್ ಮುಡಿಪು, ಖಲಂದರ್ ನಂದರಪಡ್ಪು, ಶರೀಫ್ ವಿದ್ಯಾನಗರ, ಕಾರ್ತಿಕ್ ಕುತ್ತಾರ್, ನಿಝಮ್ ಹರೇಕಳ, ಸಿಪಿಐಎಂ ಮುಖಂಡರಾದ ಮಹಾಬಲ ದೆಪ್ಪಲಿಮಾರ್, ಕಟ್ಟಡ ಕಾರ್ಮಿಕರ ಸಂಘದ ಜನಾರ್ದನ ಕುತ್ತಾರ್, ಚಂದ್ರಹಾಸ ಪಿಲಾರ್, ಕಾರ್ಮಿಕ ಮುಖಂಡ ಇಬ್ರಾಹಿಂ ಮದಕ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com