ಮಂಗಳೂರು: ಬಂದರು ಟ್ರಾಫಿಕ್ ಪೊಲೀಸ್ ಠಾಣೆಯ ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಜಿ ವಿ. ಮುಹಮ್ಮದ್ (79) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಕಳೆದ 27 ವರ್ಷಗಳಿಂದ ಬಜ್ಪೆಯಲ್ಲಿ ನೆಲೆಸಿರುವ ಅವರು, ಮೂಲತಃ ವಿಟ್ಲ ಸಮೀಪದ ಮಾರ್ನೆಮಿಗುಡ್ಡೆ ನಿವಾಸಿಯಾಗಿದ್ದರು. ಸ್ನೇಹಜೀವಿಯಾಗಿದ್ದ ಮಹಮ್ಮದ್ ಹಾಜಿ ಅವರು ಸಂಘಟನಾತ್ಮಕವಾಗಿ ಧಾರ್ಮಿಕ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದರು. ಮಂಗಳೂರು ಪೋಲೀಸ್ ಲೈನ್ ಬಳಿಯಿರುವ ಸೈದಾನ್ ಬೀವಿ ದರ್ಗಾದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಮೂಳೂರು ಮರ್ಕಝುಲ್ ತಹ್ಲೀಮುಲ್ ಇಹ್ಸಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದ ಅವರು,ಬಜ್ಪೆ ಕೇಂದ್ರ ಜುಮಾ ಮಸೀದಿಯಲ್ಲಿ ಹಲವು ವರ್ಷ ಅಧ್ಯಕ್ಷರಾಗಿದ್ದರು. ವಿಟ್ಲ ಜುಮಾ ಮಸೀದಿಯಲ್ಲಿ ಈ ಹಿಂದೆ ಗೌರವಾಧ್ಯಕ್ಷರಾಗಿದ್ದರು. ಮಂಗಳೂರು ಹಜ್ ನಿರ್ವಹಣಾ ಸಮಿತಿಯಲ್ಲೂ ಸದಸ್ಯರಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಸಮುದಾಯದ ಏಳಿಗೆಯಲ್ಲಿ ಬೆನ್ನೆಲುಬಾಗಿ ಕಾರ್ಯಾಚರಿಸುತ್ತಿದ್ದ ಹಾಜಿ ಮುಹಮ್ಮದ್ ಅವರ ಅಗಲಿಕೆಯು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರಾಜ್ಯ ವಖ್ಫ್ ಬೋರ್ಡ್ ಸದಸ್ಯರೂ, ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಬಹು ಮೌಲಾನಾ ಶಾಫಿ ಸಅದಿ ಹಾಗೂ ಗಲ್ಫ್ ಇಶಾರ ಸಂಪಾದಕರಾದ ಹಮೀದ್ ಬಜ್ಪೆಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.