janadhvani

Kannada Online News Paper

ರಾಷ್ಟ್ರೀಯ ಸಾಕ್ಷರತಾ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮತ್ತೆ ಅಗ್ರಸ್ಥಾನದಲ್ಲಿ

ನವದೆಹಲಿ: ಕೇಂದ್ರ ಸರ್ಕಾರ ರಾಷ್ಟ್ರೀಯ ಸಾಕ್ಷರತಾ ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕೇರಳ ಮತ್ತೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಆಂಧ್ರ ಪ್ರದೇಶ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಸಮೀಕ್ಷೆಯ ಪ್ರಕಾರ, ರಾಷ್ಟ್ರೀಯ ಮಾದರಿ ಸಮೀಕ್ಷೆಯ 75ನೇ ಸುತ್ತಿನಡಿಯಲ್ಲಿ ಜುಲೈ 2017 ರಿಂದ ಜೂನ್ 2018 ರ ನಡುವೆ ‘ಕುಟುಂಬ ಸಾಮಾಜಿಕ ಬಳಕೆ: ಭಾರತದಲ್ಲಿ ಶಿಕ್ಷಣ’ ಆಧಾರಿತ ಈ ವರದಿಯು ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಸಾಕ್ಷರತೆಯ ಪ್ರಮಾಣ ಕುರಿತು ರಾಜ್ಯವಾರು ಮಾಹಿತಿ ಒದಗಿಸಿದೆ. ಸಮೀಕ್ಷೆಯ ಪ್ರಕಾರ ದೇಶದ ಸಾಕ್ಷರತಾ ಪ್ರಮಾಣ ಶೇಕಡಾ 77.7 ಆಗಿದೆ. ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಸಾಕ್ಷರತೆಯ ಪ್ರಮಾಣ ಶೇ. 73.5 ರಷ್ಟಿದ್ದರೆ, ಈ ಪ್ರಮಾಣ ನಗರ ಪ್ರದೇಶಗಳಲ್ಲಿ ಶೇ 87.7 ರಷ್ಟಿದೆ. ರಾಷ್ಟ್ರಮಟ್ಟದಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ 84.7 ರಷ್ಟಿದ್ದರೆ, ಮಹಿಳೆಯರ ಪ್ರಮಾಣ 70.3 ರಷ್ಟಿದೆ. ಎಲ್ಲಾ ರಾಜ್ಯಗಳಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ ಮಹಿಳೆಯರಿಗಿಂತ ಹೆಚ್ಚಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಇನ್ನು ರಾಜ್ಯಾವಾರು ಪಟ್ಟಿಯಲ್ಲಿ ಕೇರಳ ಮತ್ತೊಮ್ಮೆ ಅಗ್ರಸ್ಥಾನದಲ್ಲಿದ್ದು, ಸಮೀಕ್ಷೆಯ ಪ್ರಕಾರ ಕೇರಳದಲ್ಲಿ ಸಾಕ್ಷರತೆ ಪ್ರಮಾಣ ಶೇ.96.2 ರಷ್ಟಿದೆ. ಆದರೆ ಕೊನೆಯ ಸ್ಥಾನದಲ್ಲಿರುವ ಆಂಧ್ರಪ್ರದೇಶ ಶೇ.66.4 ಸಾಕ್ಷರತೆ ಹೊಂದಿದೆ. ಶೇಕಡಾ 88.7 ರಷ್ಟು ಸಾಕ್ಷರತೆ ಹೊಂದಿರುವ ದೆಹಲಿ ಎರಡನೇ ಸ್ಥಾನದಲ್ಲಿದ್ದು, ಉತ್ತರಾಖಂಡ ರಾಜ್ಯ ಶೇ .87.6 ರೊಂದಿಗೆ ಮೂರನೇ ಸ್ಥಾನದಲ್ಲಿದೆ. ಉಳಿದಂತೆ ಹಿಮಾಚಲ ಪ್ರದೇಶ ಶೇ.86.6 ಮತ್ತು ಅಸ್ಸಾಂ ಶೇ.85.9 ಅಕ್ಷರಸ್ಥರನ್ನು ಹೊಂದಿದೆ. ಮತ್ತೊಂದೆಡೆ, ರಾಜಸ್ಥಾನವು ಶೇ.69.7 ಪ್ರತಿಶತದಷ್ಟು ಸಾಕ್ಷರತೆಯೊಂದಿಗೆ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಇದರ ಮೇಲೆ ಬಿಹಾರ ಶೇ.70.9, ತೆಲಂಗಾಣ ಶೇ.72.8, ಉತ್ತರ ಪ್ರದೇಶ ಶೇ.73 ಮತ್ತು ಮಧ್ಯಪ್ರದೇಶ ಶೇ.73.7 ಸಾಕ್ಷರರನ್ನು ಹೊಂದಿದೆ ಎನ್ನಲಾಗಿದೆ.

ಅಗ್ರಸ್ಥಾನದಲ್ಲಿರುವ ಕೇರಳದಲ್ಲಿ ಪುರುಷರ ಸಾಕ್ಷರತೆ ಪ್ರಮಾಣ ಶೇ. 97.4 ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ 95.2 ರಷ್ಟಿದೆ. 2ನೇ ಸ್ಥಾನದಲ್ಲಿರುವ ದೆಹಲಿಯಲ್ಲಿ ಪುರುಷರ ಸಾಕ್ಷರತೆ ಪ್ರಮಾಣ 93.7 ರಷ್ಟಿದ್ದು, ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ. 82.4 ರಷ್ಟಿದೆ. ಸಾಕ್ಷರತೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಹಿಂದುಳಿದ ರಾಜ್ಯಗಳಲ್ಲೂ ಸಹ ಪುರುಷರು ಮತ್ತು ಮಹಿಳೆಯರ ಸಾಕ್ಷರತಾ ದರದಲ್ಲಿ ಗಮನಾರ್ಹ ವ್ಯತ್ಯಾಸವಿದೆ. ಆಂಧ್ರಪ್ರದೇಶದಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ ಶೇ.73.4 ರಷ್ಟಿದ್ದರೆ, ಮಹಿಳೆಯರ (ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ) ಸಾಕ್ಷರತೆಯ ಪ್ರಮಾಣ ಶೇ.59.5 ರಷ್ಟಿದೆ. ರಾಜಸ್ಥಾನದಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ ಶೇ.80.8 ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆಯ ಪ್ರಮಾಣ ಶೇ.57.6 ರಷ್ಟಿದೆ.

ಬಿಹಾರದಲ್ಲಿ ಮಹಿಳೆಯರಿಗಿಂತ ಪುರುಷ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ. ಬಿಹಾರದಲ್ಲಿ 79.7 ರಷ್ಟು ಪುರುಷರು ಸಾಕ್ಷರರಾಗಿದ್ದರೆ, ಶೇ60 ಪ್ರತಿಶತ ಮಹಿಳೆಯರು ವಿದ್ಯಾವಂತರಾಗಿದ್ದಾರೆ.

error: Content is protected !! Not allowed copy content from janadhvani.com