✍️ಕೊಡಂಗಾಯಿ ಕಾಮಿಲ್ ಸಖಾಫಿ
ಸರಿಸುಮಾರು 25 ವರ್ಷಗಳ ಹಿಂದೆಯೇ ಸನ್ಮಾನ್ಯರಾದ ಇಸ್ಮಾಯಿಲ್ ಮಾಸ್ಟರ್ ರವರನ್ನು ನಾನು ಬಲ್ಲೆನು. ಬಡತನ ಕಾರಣ ಶಾಲಾ ಶಿಕ್ಷಣಕ್ಕೆ ಬ್ರೇಕ್ ಕೊಟ್ಟ ನಾನು, ಧಾರ್ಮಿಕ ಅರಿವನ್ನು ಬಯಸಿ ದರ್ಸ್ ನತ್ತ ಹೆಜ್ಜೆ ಇಟ್ಟಾಗ ಎಸ್ಸೆಸ್ಸೆಫ್ ನ ಕಾರ್ಯಾಚರಣೆಯು ನನ್ನ ಮನ ಸೆಳೆಯಿತು. ಅವತ್ತು ವಿಟ್ಲದಲ್ಲಿ ವಲಯ ಸಮಿತಿ ಅಸ್ತಿತ್ವದಲ್ಲಿದ್ದು, ನಮ್ಮ ಇಸ್ಮಾಯಿಲ್ ಮಾಸ್ಟರ್ ಮಂಗಳಪದವುರವರು ಪ್ರಮುಖ ಸಾರಥಿಯಾಗಿದ್ದರು.
ನನ್ನ ನೆನಪು ಸರಿಯಾದರೆ ವಿಟ್ಲ ವ್ಯಾಪ್ತಿಯಲ್ಲಿ ಕಂಬಳಬೆಟ್ಟು, ಬೈರಿಕಟ್ಟೆ, ಕೊಡಂಗಾಯಿ ಮತ್ತು ಮಂಗಳಪದವು ಊರಿನಲ್ಲಿ ಮಾತ್ರ ಶಾಖಾ ಸಮಿತಿಯು ಅಸ್ತಿತ್ವದಲ್ಲಿತ್ತು. ಆದರೂ ಕಾರ್ಯಾಚರಣೆಗಳು ವಲಯ ಮಟ್ಟದಲ್ಲಿ ವಿಜೃಂಭಣೆಯಿಂದ ನಡೆಯುತ್ತಿತ್ತು. ಸಾಮಾಜಿಕ ಸೇವೆ, ಶೈಕ್ಷಣಿಕ ಶಿಬಿರಗಳು ವಲಯ ಸಮಿತಿಯ ವತಿಯಿಂದ ಆಗಾಗ್ಗೆ ನಡೆಯುತ್ತಿತ್ತು. ದೇಶೀಯ ದಿನಾಚರಣೆಗಳ ಸಂದರ್ಭಗಳಲ್ಲಿ ರಾಜ್ಯ, ಜಿಲ್ಲಾ ಮಟ್ಟದ ನಾಯಕರು ಮತ್ತು ಖ್ಯಾತ ಚಿಂತಕರಿಂದ ವಿವಿಧ ಕಾರ್ಯಕ್ರಮ, ಕ್ಯಾಂಪುಗಳನ್ನು ಆಯೋಜಿಸುತ್ತಾ ಜನಮನ ಗೆಲ್ಲುವಲ್ಲಿ ಎಸ್ಸೆಸ್ಸೆಫ್ ಆ ದಿನದಲ್ಲೇ ಯಶಸ್ವಿಯಾಗುತ್ತಿತ್ತು.
ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಇಸ್ಮಾಯಿಲ್ ಸರ್, ತರಗತಿ ಮುಗಿದ ವೇಳೆಯಲ್ಲಿ ತನ್ನ ಸಮಯವನ್ನು ಸಂಘಟನೆಗಾಗಿ ಮೀಸಲಿಡುತ್ತಾ ನಮ್ಮನ್ನು ಹುರಿದುಂಬಿಸುತ್ತಿದ್ದರು. ಧಾರ್ಮಿಕ ವಿಷಯದಲ್ಲಿ ಹೆಚ್ಚಿನ ರೀತಿಯಲ್ಲಿ ಕಾಳಜಿ ವಹಿಸುತ್ತಾ ಸಂಘಟನೆಯನ್ನು ಹೆಗಲಲ್ಲಿರಿಸಿ ಮುನ್ನಡೆಯುತ್ತಿದ್ದ ಅವರಿಂದಲೇ ನನ್ನಂತಹ ಹಲವರು ಸಂಘಟನೆಯನ್ನು ಕಲಿತಿದಿದ್ದರು.
ಸಂಘಟನೆಯ ಕಾರ್ಯಕರ್ತರ ಸಂಬಂಧಿಕರು ಮರಣ ಹೊಂದಿದ ನಾಡು ಸುರತ್ಕಲ್ ಅಥವಾ ಸುಳ್ಯ ಎಲ್ಲಿಯಾದರೂ ವಾಹನ ಸೌಕರ್ಯ ಅತ್ಯಂತ ಕಡಿಮೆ ಇದ್ದ ಅಂದಿನ ದಿನಗಳಲ್ಲಿಯೂ ಅವರ ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದರು.
ಸಂಘಟನೆಯ ಕಾರ್ಯಕ್ರಮ, ಸಭೆಗಳಿಗೆ ನಿಗದಿತ ಸಮಯದಲ್ಲಿ ಬಂದು ತಲುಪುವ ಅವರಿಂದ ನಮಗೆ ಬಹಳಷ್ಟು ವಿಷಯಗಳನ್ನು ನೋಡಿ ಕಲಿಯಲು ಸಾಧ್ಯವಾಗುತ್ತಿತ್ತು. ಆದುದರಿಂದಲೇ ಅವರನ್ನು ನಾವು ಸಂಘಟನೆಯ ಗುರುವಿನಂತೆ ಇಂದಿಗೂ ಗೌರವದಿಂದ ಕಾಣುತ್ತಿದ್ದೇವೆ.
ಎಸ್ಸೆಸ್ಸೆಫಿನ ಶಾಖಾ ಮಟ್ಟದಿಂದ ಹಿಡಿದು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ತನಕದ ಹಲವು ಸ್ಥಾನವನ್ನು ಅಲಂಕರಿಸಿದ ಅವರು ರಾಜ್ಯ ಸಮಿತಿ ಸದಸ್ಯರಾಗಿಯೂ ಕಾರ್ಯಾಚರಿಸಿದ್ದರು.
ಸಂಘಟನೆಯ ನಿಯಮದಂತೆ ಕಳೆದ ಕೆಲವು ವರ್ಷಗಳಿಂದ ಸುನ್ನೀ ಯುವಜನ ಸಂಘದ ಸದಸ್ಯತ್ವ ಸ್ವೀಕರಿಸಿ ತನ್ನ ಊರಿನಲ್ಲಿಯೂ ಸಮಿತಿಯನ್ನು ಅಸ್ತಿತ್ವಕ್ಕೆ ತಂದು ತನ್ನ ಸಕ್ರಿಯತೆಯನ್ನು ಮುಂದುವರಿಸುತ್ತಾ ವಿಟ್ಲ ಸೆಂಟರ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೂಡಾ ಕಾರ್ಯಾಚರಿಸಿದ್ದ ಮಾಸ್ಟರ್, ಇದೀಗ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ.
ಸುನ್ನೀ ಮಾನೇಜ್ಮೆಂಟ್ ಅಸೋಶಿಯೇಶನ್, ಕರ್ನಾಟಕ ಮುಸ್ಲಿಂ ಜಮಾಅತ್ ಸೇರಿದಂತೆ ವಿವಿಧ ದೀನೀ ಸಂಘಟನೆ ಹಾಗೂ ಸಂಸ್ಥೆಯಲ್ಲೂ ಸಾರಥಿಯಾಗಿ ತನ್ನ ಛಾಪನ್ನು ಮೂಡಿಸಿದ್ದಾರೆ.
ಓರ್ವ ಅಧ್ಯಾಪಕರಾಗಿ ಸಂಘಟಕರಾಗಿ ನಾಯಕರಾಗಿ ವರ್ಕ್ ಮಾಡಿ ಪ್ರತಿಯೊಂದಕ್ಕೂ ನೀಡಬೇಕಾದ ಹಕ್ಕನ್ನು ನೀಡಿರುವುದು ಅವರ ಹೆಗ್ಗಳಿಕೆಯಾಗಿದೆ.
ಯಾವುದೇ ಕಾರ್ಯಕ್ರಮದಲ್ಲಿಯೂ ಬದ್ಧತೆ ಮತ್ತು ಸಮಯ ನಿಷ್ಠೆ ಅವರ ವಿಶೇಷತೆಯಾಗಿದೆ. ಧಾರ್ಮಿಕ ವಿಷಯಗಳಲ್ಲಿ ಹಣ, ಅಧಿಕಾರದ ಆಮಿಷಕ್ಕೆ ಒಳಗಾಗದೆ ಯಾರ ಮುಂದೆಯೂ ಸತ್ಯವನ್ನು ಹೇಳುತ್ತಿದ್ದರು.
ನಮ್ಮ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಅತ್ಯುತ್ತಮ ಕಾರ್ಯಾಚರಣೆಯನ್ನು ಗುರುತಿಸಿ ಇದೀಗ ಉತ್ತಮ ಶಿಕ್ಷಕರಾಗಿ ಇಸ್ಮಾಯಿಲ್ ಮಾಸ್ಟರ್ ರವರನ್ನು ಆಯ್ಕೆ ಮಾಡಿರುವುದು ಅರ್ಹತೆಗೆ ಸಂದ ವಿಜಯವಾಗಿದೆ. ಈ ಪ್ರಶಸ್ತಿಗೆ ಅವರು ಖಂಡಿತವಾಗಿಯೂ ಅರ್ಹರಾಗಿದ್ದಾರೆ ಎಂಬುದರಲ್ಲಿ ಯಾರಿಗೂ ಸಂದೇಹವಿಲ್ಲ. ಪ್ರತಿಯೊಂದು ಕ್ಷೇತ್ರವನ್ನು ಆವೇಶದಿಂದಲೇ ಆಯ್ಕೆ ಮಾಡಿ
ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಒದಗಿ ಬರಲಿ. ರಾಜ್ಯಮಟ್ಟದಲ್ಲೂ ಗುರುತಿಸುವಂತಹ ಉನ್ನತಿಗೆ ಏರಲಿ ಎಂದು ಹಾರೈಸುತ್ತೇನೆ, ಪ್ರಾರ್ಥಿಸುತ್ತೇನೆ.
✒️ಕೊಡಂಗಾಯಿ ಕಾಮಿಲ್ ಸಖಾಫಿ






