ಹೊಸದಿಲ್ಲಿ(ಜನಧ್ವನಿ): ಜೋರ್ಡಾನ್ ದೊರೆ ಅಬ್ದುಲ್ಲಾಹ್ ರ ಭಾರತ ಸಂದರ್ಶನವು ಅಂತಾರಾಷ್ಟ್ರೀಯ ಶಾಂತಿ ಪ್ರಕ್ರಿಯೆಗೆ ವರವಾಗಲಿದೆ ಎಂದು ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾದ ಪ್ರ.ಕಾರ್ಯದರ್ಶಿ ಶೈಖ್ ಅಬೂಬಕರ್ ಅಹ್ಮದ್ ಕಾಂತಪುರಂ ಹೇಳಿದ್ದಾರೆ.
ಭಾರತ ಮತ್ತು ಜೋರ್ಡಾನ್ ನಡುವೆ ಗಾಢವಾದ ತಾಂತ್ರಿಕ ಸಂಬಂಧವಿದೆ. ಅದು ದೀರ್ಘಕಾಲದಿಂದ ಮುಂದುವರಿಯುತ್ತಾ ಬಂದಿದೆ. ಪ್ರವಾದಿ ಕುಟುಂಬದಲ್ಲಿ ಜನಿಸಿದ ಅಬ್ದುಲ್ಲಾಹ್ , ಶಾಂತಿ ಹಾಗೂ ಸಮಾಧಾನಕ್ಕೆ ಒತ್ತು ನೀಡುವ, ಇಸ್ಲಾಮಿನ ಸುಂದರ ತತ್ವ ಆದರ್ಶಗಳಿಗಾಗಿ ಧ್ವನಿ ಗೂಡಿಸುವವರಾಗಿದ್ದು, ಧರ್ಮವನ್ನು ತಪ್ಪಾಗಿ ಪ್ರಚುರ ಪಡಿಸುವವರ ವಿರುದ್ಧ ಶಕ್ತವಾದ ನಿಲುವನ್ನೂ ತಾಳಿದವರಾಗಿದ್ದಾರೆ.ಆದ್ದರಿಂದಲೇ ಜಾಗತಿಕ ಉಲಮಾ ಸಮ್ಮೇಳನವನ್ನು ಜೋರ್ಡಾನ್ ನಲ್ಲಿ ಪ್ರತೀ ವರ್ಷ ನಡೆಸುತ್ತಾ ಬಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಮುಸ್ಲಿಮರು ಮತ್ತು ಇತರ ಧರ್ಮೀಯರ ಮಧ್ಯೆ ಆರೋಗ್ಯ ಪೂರ್ಣವಾದ ಬಾಂಧವ್ಯವನ್ನು ಉಂಟುಮಾಡಲು ಮತ್ತು ಸಮ್ಮಿಶ್ರ ಸಂಸ್ಕೃತಿಯನ್ನು ಕಾಪಾಡುವ ಸಲುವಾಗಿ ಜೋರ್ಡಾನ್ ದೊರೆ ರೂಪಿಸಿದ ‘ ಎ ಕಾಮನ್ ವರ್ಲ್ಡ್’ ಎನ್ನುವ ಒಪ್ಪಂದವು ವಿಶ್ವದಾದ್ಯಂತ ಜನಮನ್ನಣೆ ಗೆ ಪಾತ್ರವಾಗಿದೆ.
ವಿಶ್ವದಲ್ಲಿ ಅತೀ ಹೆಚ್ಚು ಮುಸ್ಲಿಮರಿರುವ ದೇಶ ಭಾರತದಲ್ಲಿ ಮುಸಲ್ಮಾನರು ಸಮಾಧಾನದ ಹಾದಿಯನ್ನು ಬಯಸುವವರಾಗಿದ್ದಾರೆ. ಭಯೋತ್ಪಾದನೆ ಮತ್ತು ಆತಂಕವಾದವನ್ನು ಹರಡುವವರನ್ನು ಇಲ್ಲಿನ ಪಂಡಿತ ನೇತೃತ್ವ ಖಂಡಿಸುತ್ತಾ ಬಂದಿದೆ ಎಂದು ಕಾಂತಪುರಂ ಹೇಳಿದರು.
ವಿಶ್ವ ಶಾಂತಿಗಾಗಿ ಮತ್ತು ಭಯೋತ್ಪಾದನಾ ಚಿಂತನೆಗಳನ್ನು ಪ್ರತಿರೋಧಿಸುವ ಸಲುವಾಗಿ, ಧಾರ್ಮಿಕ ಪಂಡಿತರ ನಡುವೆ ಬೌದ್ಧಿಕ ಚರ್ಚೆಗಳಿಗಾಗಿ ಅಮ್ಮಾನ್ ಕೇಂದ್ರವಾಗಿ ಕಾರ್ಯಾಚರಿಸುವ ‘ ದಿ ರಾಯಲ್ ಆಲುಲ್ ಬೈತ್ ಇನ್ಸ್ಟಿಟ್ಯೂಟ್ ಫಾರ್ ಇಸ್ಲಾಮಿಕ್ ತಾಟ್’ ಇದರ ಸಕ್ರಿಯ ಸದಸ್ಯರಾಗಿದ್ದಾರೆ ಕಾಂತಪುರಂ ಎ.ಪಿ ಉಸ್ತಾದ್ .
ಒಂದು ದಶಕದಲ್ಲಿ ಜೋರ್ಡಾನ್ ದೊರೆ ಆಯೋಜಿಸಿದ ಇಸ್ಲಾಮಿಕ್ ವಿದ್ವಾಂಸರ ಸಮ್ಮೇಳನದಲ್ಲಿ 2007, 2014, 2016 ವರಷಗಳಲ್ಲಿ ಜೋರ್ಡಾನ್ ದೊರೆಯ ಪ್ರತ್ಯೇಕ ಆಹ್ವಾನಿತರಾಗಿ ಭಾಗವಹಿಸಿದ ಕಾಂತಪುರಂ, ಜೋರ್ಡಾನ್ ದೊರೆಯೊಂದಿಗೆ ಸಮಾಲೋಚನೆಯನ್ನು ನಡೆಸಿದ್ದರು.